ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೆಡಿಎಸ್‌ನಿಂದಲೂ ಪಾದಯಾತ್ರೆ; ಬಿಜೆಪಿಗೆ ಗೌಡ ಗುದ್ದು (JDS | BJP | HD Deve Gowda | HD Kumaraswamy)
Bookmark and Share Feedback Print
 
ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿ ಒಂದು ಕಡೆ ಕಾಂಗ್ರೆಸ್ ಪಾದಯಾತ್ರೆ ಸಾಗುತ್ತಿರುವಂತೆಯೇ ಜೆಡಿಎಸ್ ಕೂಡ ತಾನು ಯಾತ್ರೆ ಮಾಡಲಿರುವುದಾಗಿ ಪ್ರಕಟಿಸಿದೆ. ಅಕ್ರಮ ಗಣಿಗಾರಿಕೆ ಮತ್ತು ಗೋಹತ್ಯೆ ವಿಧೇಯಕದ ವಿರುದ್ಧ ಪಕ್ಷ ಹೋರಾಡಲಿದೆ ಎಂದು ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ಭಾನುವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ಜೆಡಿಎಸ್ ನಾಯಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಬಸವ ಕಲ್ಯಾಣದಿಂದ ಯಾತ್ರೆ ಆರಂಭವಾಗಲಿರುವ ಯಾತ್ರೆ ಕೇವಲ ಬಳ್ಳಾರಿಗೆ ಸೀಮಿತವಲ್ಲ. ಇದು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ತಲುಪಲಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಸುದೀರ್ಘ ಪಾದಯಾತ್ರೆಯ ಸಂದರ್ಭಲ್ಲಿ ತಾನೂ ಸೇರಿದಂತೆ ಪಕ್ಷದ ನಾಯಕರು ಗ್ರಾಮವಾಸ್ತವ್ಯ ಮಾಡಲಿದ್ದಾರೆ. ನಮ್ಮ ಪಾದಯಾತ್ರೆಯ ಉದ್ದೇಶ ಕೇವಲ ಅಕ್ರಮ ಗಣಿಗಾರಿಕೆ ಒಂದೇ ಅಲ್ಲ, ಹಲವಾರು ಜ್ವಲಂತ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ಯಾತ್ರೆ ಕೈಗೊಳ್ಳುತ್ತಿದ್ದೇವೆ ಎಂದಿರುವ ಅವರು, ಬಿಜೆಪಿ ಜತೆಗಿನ ಮೈತ್ರಿ ವದಂತಿಗಳನ್ನೂ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಅಂತಹ ಯೋಚನೆಯೇ ಅಪ್ರಸ್ತುತ ಎಂದು ಅವರು ಹೇಳಿದ್ದಾರೆ.

ಅದೇ ಹೊತ್ತಿಗೆ ಕಾಂಗ್ರೆಸ್ ವಿರುದ್ಧವೂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಮೂಲತಃ ಪಾದಯಾತ್ರೆ ಎನ್ನುವುದು ಜೆಡಿಎಸ್ ತಂತ್ರವಾಗಿತ್ತು. ನಾವು ಅದನ್ನು ಮೂರು ತಿಂಗಳ ಹಿಂದೆಯೇ ಹೇಳಿದ್ದೆವು. ಆದರೆ ಕಾಂಗ್ರೆಸ್ ಅದನ್ನು ಇದ್ದಕ್ಕಿದ್ದಂತೆ ಹೈಜಾಕ್ ಮಾಡಿತ್ತು ಎಂದರು.

ಲೋಕಸಭೆಯಲ್ಲಿ ಚರ್ಚೆ: ಗೌಡ
ಅಕ್ರಮ ಗಣಿಗಾರಿಕೆ ವಿಚಾರವನ್ನು ತಾನು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಚರ್ಚೆ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ನಾನು ಮತ್ತು ಮಗ, ಸಂಸದ ಕುಮಾರಸ್ವಾಮಿ ಆಗಸ್ಟ್ 27ರವರೆಗೆ ಲೋಕಸಭೆಯ ಕಲಾಪದಲ್ಲಿ ಭಾಗವಹಿಸಲಿದ್ದೇವೆ. ಈ ಸಂದರ್ಭದಲ್ಲಿ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಜೆಡಿಎಸ್ ಸಭೆಯಲ್ಲಿ ಪಾಲ್ಗೊಂಡ ನಂತರ ಗೌಡರು ಪ್ರತಿಕ್ರಿಯಿಸಿದ್ದಾರೆ.

ಅಕ್ರಮ ಗಣಿಗಾರಿಕೆ ವಿಚಾರವನ್ನು ನಾನೇ ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಈ ಕಾಂಗ್ರೆಸ್‌ನವರು ಏನು ಮಾಡುತ್ತಾರೋ ನೋಡೋಣ. ಅದೇ ರೀತಿ ಗೋಹತ್ಯೆ ನಿಷೇಧದ ಕುರಿತ ರಾಜ್ಯದ ವಿಧೇಯಕದ ಕುರಿತು ಕೂಡ ಚರ್ಚೆ ನಡೆಸಲಿದ್ದೇನೆ ಎಂದು ಅವರು ನುಡಿದರು.

ಕಾಂಗ್ರೆಸ್ ಪಾದಯಾತ್ರೆ ಕುರಿತು ಖಾರ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಾದಯಾತ್ರೆ ಮಾಡಲಿ; ನಾನು ನೋಡದ ಪಾದಯಾತ್ರೆಯೇನು ಅದಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ