ತಾಕತ್ತಿದ್ದರೆ ಬಳ್ಳಾರಿಗೆ ಬಂದು ಚುನಾವಣೆಯಲ್ಲಿ ನಿಂತು ಗೆದ್ದು ತೋರಿಸಿ ಎಂಬ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಸವಾಲನ್ನು ಸ್ವೀಕರಿಸಲು ಸಿದ್ಧ ಎಂದಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಸಭೆ ವಿಸರ್ಜಿಸಿದರೆ ನಾನೇ ಬಳ್ಳಾರಿಯಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಘೋಷಿಸಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ವ್ಯಂಗ್ಯವಾಡಿದ್ದ ಜನಾರ್ದನ ರೆಡ್ಡಿ, ಬಳ್ಳಾರಿ ಕ್ಷೇತ್ರದ ಶಾಸಕ ಸೋಮಶೇಖರ ರೆಡ್ಡಿಯವರು ರಾಜೀನಾಮೆ ನೀಡುತ್ತಾರೆ; ತಾಕತ್ತಿದ್ದರೆ ಸಿದ್ದರಾಮಯ್ಯ, ದೇಶಪಾಂಡೆ ಅಥವಾ ಡಿ.ಕೆ. ಶಿವಕುಮಾರ್ ಪೈಕಿ ಯಾರಾದರೊಬ್ಬರು ಸ್ಪರ್ಧಿಸಿ ನೋಡಿ ಎಂದು ಸವಾಲು ಹಾಕಿದ್ದರು.
ಇದಕ್ಕೆ ಜವಗೊಂಡನಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಗಣಿ ರೆಡ್ಡಿಗಳ ಸವಾಲನ್ನು ಸ್ವೀಕರಿಸಲು ಕಾಂಗ್ರೆಸ್ ಯಾವತ್ತೂ ಸಿದ್ಧವಿದೆ; ವಿಧಾನಸಭೆಯನ್ನು ವಿಸರ್ಜಿಸಿದರೆ, ನಾನೇ ಚುನಾವಣೆಗೆ ನಿಲ್ಲುತ್ತೇನೆ ಮತ್ತು ಗೆಲ್ಲುತ್ತೇನೆ ಎಂದರು.
ಬಳ್ಳಾರಿ ರೆಡ್ಡಿಗಳು ಲೋಡುಗಟ್ಟಲೆ ಹಣ ಸುರಿದರೂ ನನ್ನನ್ನು ಮಣಿಸಲು ಸಾಧ್ಯವಿಲ್ಲ. ಬಳ್ಳಾರಿಯೇನು ಪಾಳೆಗಾರರ ವಶದಲ್ಲಿಲ್ಲ. ಅಲ್ಲೂ ದೇಶದಲ್ಲಿರುವ ಪ್ರಜಾಪ್ರಭುತ್ವ ಅನ್ವಯವಾಗುತ್ತದೆ. ಹಾಗಾಗಿ ನಮಗೆ ಅಲ್ಲಿ ಚುನಾವಣೆಗೆ ನಿಲ್ಲಲು ಯಾವುದೇ ರೀತಿಯ ಭಯವಿಲ್ಲ. ಬಿಜೆಪಿ ಸರಕಾರವು ವಿಧಾನಸಭೆಯನ್ನು ವಿಸರ್ಜಿಸಿ ನೋಡಲಿ, ನಾನೇ ಬಳ್ಳಾರಿಯಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಪ್ರತಿಸವಾಲು ಹಾಕಿದರು.
ಅದೇ ಹೊತ್ತಿಗೆ ರೆಡ್ಡಿಗಳ ನಡುವೆ ಹುಳಿ ಹಿಂಡುವ ಕಾರ್ಯಕ್ಕೂ ಕಾಂಗ್ರೆಸ್ ನಾಯಕ ಕೈ ಹಾಕಿದ್ದಾರೆ.
ಶ್ರೀರಾಮುಲು ಓರ್ವ ಪಾಪದ ವ್ಯಕ್ತಿ ಎಂದು ಹೊಗಳಿರುವ ಸಿದ್ದರಾಮಯ್ಯ, ಅವರ ತಲೆ ಬೋಳಿಸಿ ರೆಡ್ಡಿ ಸಹೋದರರು ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ರೆಡ್ಡಿ ಸಹೋದರರ ಪಾಪದ ಕೊಡ ತುಂಬಿದೆ. ಅವರೂ ತಲೆ ಬೋಳಿಸಿಕೊಳ್ಳಲಿ. ಅವರೇನೂ ಸತ್ಯಹರಿಶ್ಚಂದ್ರರಲ್ಲ ಎಂದು ಸಿದ್ದು ಆಕ್ರೋಶ ವ್ಯಕ್ತಪಡಿಸಿದರು.