ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಈಶ್ವರಪ್ಪ-ಜನಾರ್ದನ ರೆಡ್ಡಿ ಕಿತ್ತಾಡಿಕೊಂಡದ್ದು ನಿಜವೇ? (KS Eshwarappa | Janardhana Reddy | MP Renukacharya | BJP)
Bookmark and Share Feedback Print
 
ಆರೋಗ್ಯ ಸಚಿವ ಶ್ರೀರಾಮುಲು ಕೈಗೊಂಡಿರುವ ಪಾದಯಾತ್ರೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದರೆ, ರೆಡ್ಡಿಗಳ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಬಿಜೆಪಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಸಿಡಿಮಿಡಿಗೊಂಡರು.

ದಾವಣಗೆರೆಯಲ್ಲಿ ಬಿಜೆಪಿ ನಡೆಸುವ ಸಮಾವೇಶಕ್ಕೆ ಬಳ್ಳಾರಿ ಸಹೋದರರು ಬರದಿರಲು ನಿರ್ಧರಿಸಿರುವುದರಿಂದ ಅವರ ಮನವೊಲಿಸಲು ಈಶ್ವರಪ್ಪ ಅವರು ಜನಾರ್ದನ ರೆಡ್ಡಿ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ನಾಯಕರಿಬ್ಬರು ಕಿತ್ತಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಬಳ್ಳಾರಿ ಸಚಿವರುಗಳ ವಿರುದ್ಧ ರೇಣುಕಾಚಾರ್ಯ ಬಹಿರಂಗವಾಗಿ ಅವಹೇಳನಕಾರಿ ಟೀಕೆಗಳನ್ನು ಮಾಡುತ್ತಿದ್ದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ನೀವು ನಮಗೆ ಹಿತವಚನ ಹೇಳುವ ಅಗತ್ಯವೇನಿದೆ ಎಂದು ರೆಡ್ಡಿ ಈ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ತಿರುಗೇಟು ನೀಡಿದ ಈಶ್ವರಪ್ಪ, ಪಕ್ಷವು ಪಾದಯಾತ್ರೆ ಕೈಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ ಮೇಲೂ ಮಾತು ಮೀರುವ ಅಗತ್ಯವೇನಿತ್ತು ಎಂದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಾ ಕೆಲ ಹೊತ್ತು ವಾಗ್ವಾದ ನಡೆಸಿದ್ದಾರೆ. ಈ ಬಿರುಸಿನ ಮಾತುಕತೆ ಸುಮಾರು ಒಂದು ಗಂಟೆ ಕಾಲ ನಡೆದಿದೆ.

ಶ್ರೀರಾಮುಲು ಕೇಶಮುಂಡನದ ವಿರುದ್ಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ಷೇಪದ ಹೇಳಿಕೆಗಳನ್ನು ನೀಡುತ್ತಿರುವ ವಿಚಾರವನ್ನೂ ರೆಡ್ಡಿ ಪ್ರಸ್ತಾಪಿಸಿದ್ದಾರೆ. ಈ ಕುರಿತು ಈಶ್ವರಪ್ಪನವರಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ ಸಭೆಯ ನಂತರ ಪ್ರತಿಕ್ರಿಯಿಸಿದ ಈಶ್ವರಪ್ಪ, ದಾವಣಗೆರೆ ಸಮಾವೇಶದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು ಎಂದಷ್ಟೇ ಹೇಳಿದರು. ಭಿನ್ನಮತದ ಕುರಿತು ಪ್ರಶ್ನಿಸಿದಾಗ, ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ, ಯಾವುದೇ ರೀತಿಯಲ್ಲೂ ಭಿನ್ನಮತ-ಭಿನ್ನಾಭಿಪ್ರಾಯಗಳಿಗೆ ನಮ್ಮಲ್ಲಿ ಅವಕಾಶವಿಲ್ಲ ಎಂದರು.

ಆದರೆ ಜನಾರ್ದನ ರೆಡ್ಡಿ ಕುಪಿತಗೊಂಡಿದ್ದರು. 'ವರ ನೀಡುವಂತೆ ಜನರು ಭಗವಂತನಲ್ಲಿ ಬೇಡುತ್ತಾರೆ. ವರ ಪಡೆದ ಬಳಿಕ ಭಗವಂತನನ್ನೇ ಕೆಲವರು ಮರೆಯುತ್ತಾರೆ' - ವ್ಯವಸ್ಥೆಯೇ ಹೀಗಿರುವಾಗ ನಿಷ್ಠೆ ಬದಲಿಸಿರುವ ರೇಣುಕಾಚಾರ್ಯ ಮತ್ತು ಅವರ ಬೆಂಬಲಿಗರ ಕುರಿತು ತಾವು ತಲೆಕೆಡಿಸಿಕೊಳ್ಳುವುದಿಲ್ಲ. ಇದೆಲ್ಲ ಬೆಳವಣಿಗೆಳನ್ನು ಅಧ್ಯಕ್ಷರು ಗಮನಿಸುತ್ತಿದ್ದಾರೆ ಎಂಬುದು ನಮ್ಮ ನಂಬಿಕೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ