ಗೋ ಮಾಂಸ ನಿಷೇಧದಿಂದ ಹೋಟೆಲ್ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂಬ ಆತಂಕ ಹೋಟೆಲ್ ಮಾಲೀಕರದ್ದು, ಉದ್ಯಾನನಗರಿಯ ಹೋಟೆಲ್‌ಗಳಲ್ಲಿನ ಮೆನುವಿನಲ್ಲಿ ಬೀಫ್ ಮಾಯವಾಗಿದೆ. ಅಲ್ಲದೇ, ಹೋಟೆಲ್‌ಗಳಲ್ಲಿ ಬೀಫ್ ದೊರೆಯದಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.
ವಿದೇಶಿ ಮತ್ತು ಸ್ಥಳೀಯ ಗ್ರಾಹಕರಿಂದ ಹೋಟೆಲ್‌ಗಳಲ್ಲಿ ಗೋ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಕಡಿಮೆ ದರದಲ್ಲಿ ಗೋ ಮಾಂಸ ದೊರೆಯುತ್ತಿರುವುದರಿಂದ ಬೀಫ್‌ಗೆ ಹೆಚ್ಚಿನ ಬೇಡಿಕೆ ಇದೆ. ನಗರದ ಶೇ.90ರಷ್ಟು ಹೋಟೆಲ್‌ಗಳಲ್ಲಿ ಗೋ ಮಾಂಸ ಮಾರಾಟ ಮಾಡಲಾಗುತ್ತಿದೆ. ಆದರೆ ಸರಕಾರದಿಂದ ಗೋ ಹತ್ಯೆ ನಿಷೇಧದಿಂದಾಗಿ ಗೋ ಮಾಂಸ ದೊರೆಯದಿರುವುದು ದೊಡ್ಡ ಚಿಂತೆಗೀಡು ಮಾಡಿದೆ ಎಂದು ಫನೂಸ್ ಹೋಟೆಲ್ ಮಾಲೀಕ್ ಶಾಹೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರದ ನಿರ್ಧಾರದಿಂದಾಗಿ ಹೋಟೆಲ್ ಉದ್ಯಮದ ಮೇಲೆ ತುಂಬಾ ಪರಿಣಾಮ ಬೀರಿದೆ. ಅಷ್ಟೇ ಅಲ್ಲ, ಗೋ ಮಾಂಸ ಪ್ರಿಯರಿಗೂ ಇದರಿಂದ ನಿರಾಸೆ ಉಂಟಾಗಿದೆ. ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸಂಪುಟದಲ್ಲಿ ನಿರ್ಧರಿಸಿದ್ದು, ಕಾಯ್ದೆಗೆ ಅಂಕಿತ ಹಾಕಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಕಳುಹಿಸಿ ಕೊಡಲಾಗಿದೆ. ರಾಜ್ಯಪಾಲರು ಕಾಯ್ದೆ ಪರಿಶೀಲನೆಗಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.