ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಪಾದಯಾತ್ರೆ: ಶ್ರೀರಾಮುಲು
ಹೊಸಪೇಟೆ, ಸೋಮವಾರ, 2 ಆಗಸ್ಟ್ 2010( 13:51 IST )
ನಾವು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದೇವೆ ಎಂಬುದನ್ನು ಕಾಂಗ್ರೆಸ್ ನಾಯಕರು ದಾಖಲೆ ಸಮೇತ ಸಾಬೀತು ಮಾಡಿದರೆ ಕ್ಷಣ ಕೂಡ ಸಚಿವ ಸ್ಥಾನದಲ್ಲಿ ಮುಂದುವರಿಯಲಾರೆವು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸವಾಲು ಹಾಕಿದ್ದಾರೆ.
ನಗರದ ಟೌನ್ ರೀಡಿಂಗ್ ರೂಮ್ ಆವರಣದಲ್ಲಿ ಬಳ್ಳಾರಿ ಜಿಲ್ಲಾ ಸ್ವಾಭಿಮಾನಿ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ನವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರು ಸಾವಿರ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಜಿಲ್ಲೆಯ ಜನರಿಗೆ ಅಪಮಾನ ಮಾಡಿದ್ದಾರೆ. ಅವರು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ. ಪಾದಯಾತ್ರೆಯನ್ನು ಸ್ವಾಗತಿಸುವೆ. ಜತೆಗೆ ಅವರಿಗೆ ಶಾಮಿಯಾನ ಹಾಕಿ ಸಮಾವೇಶ ನಡೆಸಲು ಅನುಕೂಲ ಮಾಡಿಕೊಡುವೆ. ಅವರು ಬಳ್ಳಾರಿಗೆ ಬರಲು ಹೆದರಬಾರದು ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರ ಕೋಟೆಯನ್ನು ಛಿದ್ರಗೊಳಿಸಿದ ಬಳಿಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯ ಕಾರ್ಯಕರ್ತರು ಕೇಂದ್ರದಲ್ಲೂ ಬಿಜೆಪಿಯನ್ನು ಗದ್ದುಗೆಗೇರಿಸುತ್ತಾರೆ ಎಂದು ಹೆದರಿ ಯಾವುದೇ ವಿಷಯ ಇಲ್ಲದ ಕಾಂಗ್ರೆಸ್ ನಾಯಕರು ಅಕ್ರಮ ಗಣಿಗಾರಿಕೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಹರಿಹಾಯ್ದರು.
ಅಕ್ರಮ ಗಣಿಗಾರಿಕೆಯಲ್ಲಿ ನಾವು ಭಾಗಿಯಾಗಿಲ್ಲ. ಸಿಬಿಐ ತನಿಖೆ ಬೇಡ. ಸುಮ್ಮನೆ ಗುಜರಾತ್ ಗೃಹ ಮಂತ್ರಿಯನ್ನು ಸಿಬಿಐ ಬಂಧಿಸಿದೆ. ರಾಜೀವ್ ಗಾಂಧಿ ಬೋರ್ಫೋಸ್ ಹಗರಣದ ತನಿಖೆ ಏನಾಯಿತು?. ಇಂದಿರಾ ಗಾಂಧಿ ಹತ್ಯೆ ಬಳಿಕ ಸಿಖ್ ಹತ್ಯಾಕಾಂಡ ಮಾಡಲಾಯಿತು. ಆದರೆ ಸಿಬಿಐ ಬಿ ರಿಪೋರ್ಟ್ ಹಾಕಿ ಪ್ರಕರಣದಲ್ಲಿ ಭಾಗಿಯಾದವರನ್ನು ಬಚಾವ್ ಮಾಡಿದೆ. ಮುಲಾಯಂ ಸಿಂಗ್ ಅವರನ್ನು ಹೆದರಿಸಲು ಸಿಬಿಐ ತನಿಖೆ ಮಾಡಲಾಯಿತು. ಲಾಲು ಪ್ರಸಾದ್ ಅವರನ್ನು ಸಿಬಿಐ ತನಿಖೆಯಿಂದ ಇದೇ ದೇವೇಗೌಡರು ಬಚಾವ್ ಮಾಡಿದರು. ಆದ್ದರಿಂದ ಸಿಬಿಐ ತನಿಖೆಯಿಂದ ಬಿಜೆಪಿ ನಾಯಕರನ್ನು ಹಣಿಯಲು ಕಾಂಗ್ರೆಸ್‌ನ ಕೇಂದ್ರ ನಾಯಕರು ಸಜ್ಜಾಗಿದ್ದಾರೆ. ಆದ್ದರಿಂದ ಅಕ್ರಮ ಗಣಿಗಾರಿಕೆ ಕುರಿತ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ತಾವು ಒಪ್ಪುವುದಿಲ್ಲ ಎಂದರು.