ಬಳ್ಳಾರಿಯ ಸ್ವಾಭಿಮಾನ ಕಾಪಾಡಲು ಸಚಿವ ಶ್ರೀರಾಮುಲು ಮಾತ್ರವೇ ಯಾಕೆ ತಲೆ ಬೋಳಿಸಿಕೊಳ್ಳಬೇಕು? ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲಾ ಸಚಿವರೂ ತಲೆ ಬೋಳಿಸಿಕೊಂಡು ರಾಜ್ಯದ ಸ್ವಾಭಿಮಾನ ಕಾಪಾಡಲಿ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ. ಜನಾರ್ದನ ಪೂಜಾರಿ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಪಕ್ಷದ ನಾಡ ರಕ್ಷಣಾ ನಡಿಗೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿರುವುದರಲ್ಲಿ ಯಾವುದೇ ಸಂಶಯವಿಲ್ಲ; ಇದೇ ರೀತಿ ಬೆಂಬಲ ಮುಂದುವರಿದಲ್ಲಿ ಬಿಜೆಪಿ ಸರಕಾರ ಪತನ ಖಚಿತ ಎಂದರು.
ಬಿಜೆಪಿ ಸರಕಾರದ್ದು ಬಳ್ಳಾರಿ ಗರ್ಭದಲ್ಲಿ ಗಣಿ ಲೂಟಿ ಮಾಡಿದ್ದೇ ಮಹಾನ್ ಸಾಧನೆ. ಹಾಗಾಗಿ ಅವರಿಗೆ ಕಾಂಗ್ರೆಸ್ ಆಡಳಿತದ ಅವಧಿಯನ್ನು ಟೀಕಿಸುವ ಯಾವುದೇ ಅರ್ಹತೆಯಿಲ್ಲ. ಮೊದಲು ತಮ್ಮ ಸಾಧನೆಗಳನ್ನು ನೋಡಿಕೊಳ್ಳಲಿ ಎಂದು ಪೂಜಾರಿ ಸಲಹೆ ನೀಡಿದ್ದಾರೆ.
ನೂರು ವರ್ಷ ಹಂದಿಯಾಗಿ ಬಾಳುವುದಕ್ಕಿಂತ ಮೂರೇ ವರ್ಷ ನಂದಿಯಾಗಿ ಬಾಳುವುದು ಲೇಸು. ಸಂಪುಟ ಸಹೋದ್ಯೋಗಿಗಳ ಅಕ್ರಮ ತಡೆಯಲು ಸಾಧ್ಯವಾಗದೆ ಅಸಹಾಯಕರಾಗಿ ಕೈ ಚೆಲ್ಲುವ ಬದಲು ವಿಧಾನಸಭೆ ವಿಸರ್ಜಿಸಿ ಮತ್ತೆ ಚುನಾವಣೆ ಎದುರಿಸಿ. ಆಗ ನಿಜವಾಗಿಯೂ ಯಡಿಯೂರಪ್ಪ ಹೀರೋ ಆಗಲಿದ್ದಾರೆ ಎಂದಿರುವ ಕಾಂಗ್ರೆಸ್ ನಾಯಕ, ಇಷ್ಟು ಧೈರ್ಯ ಬಿಜೆಪಿಗೆ ಇದೆಯೇ ಎಂದು ಪ್ರಶ್ನಿಸಿದರು.
ಮತ್ತೆ ಮುಖ್ಯಮಂತ್ರಿಯವರ ವಿರುದ್ಧವೇ ವಾಗ್ದಾಳಿ ನಡೆಸಿದ ಪೂಜಾರಿ, ಮಾತುಮಾತಿಗೂ ತಾನು ಕುರ್ಚಿಗೆ ಅಂಟಿಕೊಂಡಿಲ್ಲ ಎಂದು ಯಡಿಯೂರಪ್ಪ ಹೇಳುತ್ತಾರೆ. ಕುರ್ಚಿ ಬಿಡಿ ಎಂದು ಅವರಿಗೆ ಯಾರೂ ಹೇಳಿಲ್ಲ. ಅಧಿಕಾರ ಚಲಾಯಿಸಿ, ಆದರೆ ಅಕ್ರಮ ಗಣಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ಭ್ರಷ್ಟರಿಗೆ ಜೈಲು ತೋರಿಸಿ ಎಂದು ನಾವು ಆಗ್ರಹಿಸುತ್ತಿದ್ದೇವೆ. ಆದರೆ ಮುಖ್ಯಮಂತ್ರಿಯವರೇ ಕತ್ತಲೆಯಲ್ಲಿದ್ದಾರೆ. ಅವರಿಗೆ ಜ್ಞಾನದ ಬೆಳಕು ತೋರಿಸಲು ಹೋದವರ ಮೇಲೆ ಎಗರಾಡುತ್ತಿದ್ದಾರೆ ಎಂದರು.
ರೇಣು-ಯಡ್ಡಿ ಜಗಳದಲ್ಲಿ ಈಶ್ವರಪ್ಪ ರೆಫರಿ.... ಅಕ್ರಮ ಗಣಿಗಾರಿಕೆ ವಿರೋಧಿಸಿ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿದ ಬಳಿಕ ಬಿಜೆಪಿ ಸರಕಾರದಲ್ಲಿ ಭಾರೀ ಒಡಕು ಸೃಷ್ಟಿಯಾಗಿದೆ. ಜನಾರ್ದನ ರೆಡ್ಡಿ ಮತ್ತು ರೇಣುಕಾಚಾರ್ಯ ನಡುವೆ ಜಂಗೀಕುಸ್ತಿ ಆರಂಭವಾಗಿದೆ. ಇಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ರೆಫರಿ ಪಾತ್ರ ಮಾಡುತ್ತಿದ್ದಾರೆ. ಕುಸ್ತಿಯಲ್ಲಿ ರೆಡ್ಡಿ ಗೆದ್ದರೆ ಸರಕಾರ ಪತನ ಖಚಿತ. ಇದನ್ನು ಅರಿತ ಈಶ್ವರಪ್ಪನವರು ರೆಡ್ಡಿ ಓಲೈಕೆಗಾಗಿ ಓಡಿದ್ದರು ಎಂದು ಪೂಜಾರಿ ವ್ಯಂಗ್ಯವಾಡಿದರು.
ಮಾತಿನುದ್ದಕ್ಕೂ ಬಿಜೆಪಿ ಸರಕಾರವನ್ನು ಲೇವಡಿ ಮಾಡುತ್ತಲೇ ಸಾಗುತ್ತಿದ್ದ ಪೂಜಾರಿ, ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ ಎಂದು ದಾವಣಗೆರೆಯಲ್ಲಿನ ಬಿಜೆಪಿ ಜನಜಾಗೃತಿ ಸಮಾವೇಶದಲ್ಲಿ ಈಶ್ವರಪ್ಪ ಹೇಳಿದ್ದಾರೆ; ಸಂಪುಟದ ಮಂತ್ರಿಗಳ ಮತ್ತು ಅಧಿಕಾರಿಗಳ ಅಭಿವೃದ್ಧಿ ಮಾಡುವ ಮೂಲಕ ಬಿಜೆಪಿ ಸರಕಾರ ನಿಜಕ್ಕೂ ಸಾಕಷ್ಟು ಪ್ರಗತಿ ಸಾಧಿಸಿದೆ, ಅದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇದನ್ನು ಜನತೆ ನೋಡುತ್ತಿದ್ದಾರೆ ಎಂದರು.