ಸಿಎಂಗೆ ತಲೆ ಸರಿಯಿಲ್ಲ, ಬಿಜೆಪಿ ರಾಜ್ಯಕ್ಕೆ ಶಾಪ: ದೇಶಪಾಂಡೆ
ಚಿತ್ರದುರ್ಗ, ಮಂಗಳವಾರ, 3 ಆಗಸ್ಟ್ 2010( 11:25 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಹಾಗಾಗಿಯೇ ಬಹಿರಂಗ ಸಭೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಿಂದ ಬಳ್ಳಾರಿವರೆಗೆ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ನಾಡ ರಕ್ಷಣಾ ನಡಿಗೆ ಪಾದಯಾತ್ರೆ ಸೋಮವಾರ ಹಿರಿಯೂರಿನಿಂದ ಹೊರಡುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಕೇವಲ ಅಕ್ರಮ ಗಣಿಗಾರಿಕೆ ವಿರುದ್ಧ ಮಾತ್ರ ಪಾದಯಾತ್ರೆ ಮಾಡುತ್ತಿಲ್ಲ. ಭ್ರಷ್ಟಾಚಾರ ಸೇರಿದಂತೆ ಎಲ್ಲ ವಿಷಯಗಳನ್ನು ಇಟ್ಟುಕೊಂಡು ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಹಾಗಾಗಿ ಬಿಜೆಪಿ ಕರ್ನಾಟಕಕ್ಕೆ ಶಾಪ, ಆ ಶಾಪ ವಿಮೋಚನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿರುವುದಾಗಿ ಹೇಳಿದರು.
ಅಕ್ರಮ ಗಣಿಗಾರಿಕೆಯಲ್ಲಿ ಯಾರೇ ಶಾಮೀಲಾಗಿರಲಿ. ಅಂಥವರಿಗೆ ಶಿಕ್ಷೆಯಾಗಬೇಕು. ಲೂಟಿ ಮಾಡುವವರಿಗೆ ಯಾವುದೇ ಜಾತಿ, ಪಕ್ಷ ಇಲ್ಲ. ಅಂತಹ ಕಳ್ಳರನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಹಾವೇರಿ ಗೋಲಿಬಾರ್ ಪ್ರಕರಣದ ವರದಿಯನ್ನು ಸರಕಾರ ತಿರಸ್ಕರಿಸಬೇಕಾಗಿತ್ತು. ಆ ವರದಿಯಲ್ಲಿ ಮೃತಪಟ್ಟವರು ರೈತರಲ್ಲ, ಗೂಂಡಾಗಳು ಎಂದು ತಿಳಿಸಲಾಗಿದೆ. ಹೀಗೆ ಹಲವಾರ ವಿಷಯಗಳಿಗೆ ಸರಕಾರ ಸೂಕ್ತವಾಗಿ ಸ್ಪಂದಿಸಿಲ್ಲ ಎಂದರು.