ಕಾಂಗ್ರೆಸ್ ಮುಖಂಡರು ಬಳ್ಳಾರಿಗೆ ಪಾದಯಾತ್ರೆ ಕೈಗೊಂಡು ಕೇವಲ ಬೂಟಾಟಿಕೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಎಂದು ಜೆಡಿಎಲ್‌ಪಿ ಮುಖಂಡ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬೆಳಗಾವಿ ಅಧಿವೇಶನದಲ್ಲೇ ಗಣಿ ಹಗರಣ ಬಹಿರಂಗಪಡಿಸಿದ್ದರು. ಅಂದು ಮೌನ ವಹಿಸಿದ್ದ ಕಾಂಗ್ರೆಸ್ ಮುಖಂಡರು ಈಗ ಪಾದಯಾತ್ರೆ ನಡೆಸುತ್ತಿರುವ ಔಚಿತ್ಯವೇನು ಎಂದು ಪ್ರಶ್ನಿಸಿದರು.
ಗಣಿ ಹಗರಣದ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾಂಗ್ರೆಸ್ ಮುಖಂಡರು ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದ ಅವರು, ಸದನದಲ್ಲಿ ನಿಲುವಳಿ ಸೂಚನೆ ಮೇಲೆ ಗಣಿ ಹಗರಣದ ಚರ್ಚೆಗೆ ಅವಕಾಶ ಕೋರಿದ್ದು ಜೆಡಿಎಸ್ ಎಂಬುದನ್ನು ಪಾದಯಾತ್ರೆ ನಡೆಸುತ್ತಿರುವವರು ಮನಗಾಣಬೇಕು ಎಂದು ಸಿದ್ಧರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದರು.
ಕಾಂಗ್ರೆಸ್-ಬಿಜೆಪಿಯಿಂದ ಸಾಮಾಜಿಕ ಬದ್ಧತೆ ಕಲಿಯುವ ಅಗತ್ಯ ಜೆಡಿಎಸ್‌ಗೆ ಇಲ್ಲ. ಗಣಿ ಹಗರಣ ಬಹಿರಂಗಪಡಿಸುವ ಮೂಲಕ ನಮ್ಮ ಬದ್ಧತೆಯನ್ನು ನಾವು ಉಭಯ ಸದನಗಳಲ್ಲೂ ಸಾಬೀತುಪಡಿಸಿದ್ದೇವೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಪಾದಯಾತ್ರೆ ನಡೆಸುತ್ತಿರುವ ಮುಖಂಡರು ರಾತ್ರಿ ಎಲ್ಲಿರುತ್ತಾರೆ, ಬೆಳಗ್ಗೆ ಎಲ್ಲಿರುತ್ತಾರೆ ಎಂಬುದು ತಿಳಿದಿದೆ. ಅಂಥವರಿಗೆ ಮೊದಲು ಅವರು ಸಾಮಾಜಿಕ ಬದ್ಧತೆಯ ಪಾಠ ಹೇಳಲಿ ಎಂದ ಅವರು, ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್‌ನವರು ಮಾಡಿದ ಮಸಲತ್ತು ಏನೆಂದು ತಿಳಿದಿದೆ. ಅಂಥವರು ನೀತಿಪಾಠ ಹೇಳುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.
ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮೇರೆಗೆ ಗಣಿ ಹಗರಣದ ಚರ್ಚೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾಲಾವಕಾಶ ಕೋರಿದ್ದಾರೆ. ಕಾಂಗ್ರೆಸ್‌ನ ಸಂಸತ್ ಸದಸ್ಯರಿಗೆ ಬದ್ಧತೆ ಇದ್ದರೆ ಚರ್ಚೆಯಲ್ಲಿ ಭಾಗವಹಿಸಿ ಬೆಂಬಲಿಸಲಿ ಎಂದು ಸವಾಲು ಹಾಕಿದರು.