ಗಣಿಧಣಿಗಳ ರಕ್ಷಣೆಗೆ ಬಿಜೆಪಿ ಸಮಾವೇಶ: ಅಲ್ಲಮಪ್ರಭು ಪಾಟೀಲ್
ಗುಲ್ಬರ್ಗ, ಮಂಗಳವಾರ, 3 ಆಗಸ್ಟ್ 2010( 12:42 IST )
ರಾಜ್ಯದಲ್ಲಿ ನೂರಾರು ಸಮಸ್ಯೆಗಳು ತಾಂಡವವಾಡುತ್ತಿರುವಾಗ ಇವುಗಳಿಗೆ ಸೂಕ್ತ ಪರಿಹಾರ ಸೂಚಿಸಬೇಕಾದ ಬಿಜೆಪಿ ಸರಕಾರ ಯಾವ ಪುರುಷಾರ್ಥಕ್ಕೆ ಸಮಾವೇಶ ನಡೆಸುತ್ತಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಪಠ್ಯ ಪುಸ್ತಕ, ಬಿತ್ತನೆ ಬೀಜ, ರಸಗೊಬ್ಬರ ಕೊರತೆ, ನೆರೆ ಸಂತ್ರಸ್ಥರ ಗೋಳಾಟ ಹೀಗೆ ನೂರಾರು ಸಮಸ್ಯೆಗಳು ರುದ್ರತಾಂಡವಾಡುತ್ತಿರುವಾಗ ಬಿಜೆಪಿ ವಿಭಾಗ ಮಟ್ಟದ ರಾಲಿ, ಸಮಾವೇಶಗಳನ್ನು ನಡೆಸುತ್ತಿರುವುದು ನಾಚಿಕೆ ತರುವ ಸಂಗತಿ ಎಂದರು.
ಜನರ, ರೈತರ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿ ಸರಕಾರ ಈಗ ಸಾಧನ ಸಮಾವೇಶದಂತೆ ಮಾಡಿ ಸರಕಾರಿ ಯಂತ್ರ ದುರ್ಬಳಕೆ ಮಾಡಿಕೊಂಡು ಕುಂದಿ ಹೋಗಿರುವ ಪಕ್ಷದ ವರ್ಚಸ್ಸನ್ನು ಮರಳಿ ಗಿಟ್ಟಿಸಿಕೊಳ್ಳಲು ಹುಸಿ ಪ್ರಯತ್ನ ನಡೆಸುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದರು.
ಈ ಸರಕಾರಕ್ಕೆ ಜನ ಬೇಕಿಲ್ಲ, ಗಣಿಧಣಿಗಳೇ ಬೇಕಾಗಿದ್ದಾರೆ ಎಂಬ ಸಂದೇಶವನ್ನು ಬಿಜೆಪಿ ತನ್ನ ವಿಭಾಗೀಯ ಸಮಾವೇಶ ಮೂಲಕ ಸಮರ್ಥಿಸಿಕೊಳ್ಳಲು ಹೊರಟಂತಿದೆ. ಜನರು ಬಿಜೆಪಿ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂದರು.
ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಅಧಿಕಾರದಲ್ಲಿದ್ದಾಗ ವಿಮಾನ ನಿಲ್ದಾಣಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಂಡರು. ಆಗ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಬಿಜೆಪಿಯಿಂದ ಆಗಲಿಲ್ಲ, ಈಗ ಆ ಜಾಗದಲ್ಲಿ ರಾಜಕೀಯ ಸಮಾವೇಶ ನಡೆಸಲು ಮುಂದಾಗಿರುವುದು ನಾಚಿಕೆಗೇಡಿಸನ ಸಂಗತಿ. ಇದು ನೋಡಿದರೆ ಇವರ ಸಾಮರ್ಥ್ಯ ಗೊತ್ತಾಗುತ್ತದೆ ಎಂದು ಆರೋಪಿಸಿದರು.
ಬಿಜೆಪಿ ಗುಲ್ಬರ್ಗ ಪ್ರಗತಿಗೆ ಕೊಂಚವೂ ಗಮನ ನೀಡಿಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಕೆಡಿಬಿಗೆ 100 ಕೋಟಿ, ಗುಲ್ಬರ್ಗ ಪಾಲಿಕೆಗೆ 100 ಕೋಟಿ ರೂಪಾಯಿ ನೀಡುವುದಾಗಿ ಹೇಳಿಕೊಂಡು ಅದರಲ್ಲಿ ಸ್ವಲ್ಪ ಹಣ ಮಾತ್ರ ಬಿಡುಗಡೆ ಮಾಡಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದರು.