ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪಾದಯಾತ್ರೆ ಮಂಗಳವಾರ ಹತ್ತನೆ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕನಕದಾಸರ ಗೆಟಪ್‌ನಲ್ಲಿ ಹೆಜ್ಜೆ ಹಾಕಿದರೆ, ಮೋಟಮ್ಮ ಕೈಯಲ್ಲಿ ಬೇವಿನ ಸೊಪ್ಪು ಹಿಡಿದು ಕುಣಿಯುವ ಮೂಲಕ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.
ಗೊಲ್ಲಹಳ್ಳಿಯಿಂದ ಹೊರಟಿರುವ ಕಾಂಗ್ರೆಸ್ ಪಾದಯಾತ್ರೆಗೆ ಭಾರೀ ಜನಬೆಂಬಲ ದೊರೆಯತೊಡಗಿದೆ.ಏತನ್ಮಧ್ಯೆ ಪಾದಯಾತ್ರೆ ಒಂಬತ್ತು ದಿನ ಕಳೆದರು ಕೂಡ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಉತ್ಸಾಹ ಮಾತ್ರ ಕುಂದಿಲ್ಲ ಎಂಬುದಕ್ಕೆ ಸಿದ್ದರಾಮಯ್ಯ ಅವರ ಕನಕದಾಸರ ಗೆಟಪ್ ಸಾಕ್ಷಿಯಾಯಿತು. ದಾರಿಯುದ್ದಕ್ಕೂ ಗ್ರಾಮಸ್ಥರು ಆರತಿ ಎತ್ತಿ, ಹಣೆಗೆ ತಿಲಕವಿಟ್ಟು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕನಕದಾಸರಂತೆ ಕೈಯಲ್ಲಿ ತಂಬೂರಿ ಹಿಡಿದು ತಮಟೆ ಶಬ್ದಕ್ಕೆ ಹೆಜ್ಜೆ ಹಾಕಿದರು. ಮತ್ತೊಂದೆಡೆ ಮೋಟಮ್ಮ ಸೇರಿದಂತೆ ಇನ್ನಿತರ ಮಹಿಳಾ ಕಾರ್ಯಕರ್ತೆಯರು ತಮಟೆ ಹೊಡೆತಕ್ಕೆ ಹೆಜ್ಜೆ ಹಾಕಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ಬೊಬ್ಬೆಗಳೆದ್ದ ಪರಿಣಾಮ ವೈದ್ಯರು ಮುಲಾಮು ಹಚ್ಚಿದರು. ಆ ನಂತರ ಡಿಕೆಶಿ ಯಾತ್ರೆಯಲ್ಲಿ ಸೇರಿಕೊಂಡರು.
ಶ್ರೀರಾಮುಲು ಬಂಧನ!:ಕಾಂಗ್ರೆಸ್ ಪಾದಯಾತ್ರೆಯಲ್ಲಿ ಒಂದೆಡೆ ಕುಣಿತ, ಹಾಡು ನಡೆಯುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನ ಸೋಮಶೇಖರ ಅವರ ತಂಡ ಶ್ರೀರಾಮುಲು ಅವರ ವೇಷ ಪ್ರದರ್ಶಿಸಿ ಶ್ರೀರಾಮುಲು ಬಂಧನ ಅಣಕು ಪ್ರದರ್ಶನ ನಡೆಸಿ ಎಲ್ಲರ ಗಮನಸೆಳೆದರು. ಈ ಸಂದರ್ಭದಲ್ಲಿ ಕಾರ್ಯಕರ್ತರು, ಶ್ರೀರಾಮುಲು ಬಂಧನ, ಕಳ್ಳರ ಕಳ್ಳ ಶ್ರೀರಾಮುಲು ಎಂಬ ಘೋಷಣೆ ಕೂಗಿದರು. ಇದೀಗ ಗೊಲ್ಲಹಳ್ಳಿಯಿಂದ ಹೊರಟ ಕಾಂಗ್ರೆಸ್ ಪಾದಯಾತ್ರೆ ಚಳ್ಳಕೆರೆಯತ್ತ ಸಾಗಿದೆ.
ಸಿಎಂಗೆ ಬಿಪಿ ಜಾಸ್ತಿಯಾಗಿದೆ-ಸಿದ್ದು: ಪಾಪ...ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬಿಪಿ ಜಾಸ್ತಿಯಾಗಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಸಿದ್ದರಾಮಯ್ಯ ಸೋಮವಾರ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಸಿಎಂ ವಾಗ್ದಾಳಿಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿಗಳು ಮೊದಲು ವಿಪಕ್ಷಗಳಿಗೆ ಗೌರವ ನೀಡುವುದನ್ನು ಕಲಿತುಕೊಳ್ಳಬೇಕು. ಮುಖ್ಯಮಂತ್ರಿಗಳಿಗೆ ಧೈರ್ಯವಿದ್ದರೆ ವಿಧಾನಸಭೆ ವಿಸರ್ಜಿಸಿ, ಚುನಾವಣೆಗೆ ಬರಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಿಂದ ಭಯಗೊಂಡಿರುವ ಬಿಜೆಪಿ ಮುಖಂಡರು ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೆ, ಅಕ್ರಮ ಗಣಿಗಾರಿಕೆಯನ್ನು ಕಾಂಗ್ರೆಸ್ ಮುಖಂಡರು ಸಾಬೀತುಪಡಿಸಿದರೆ ನೇಣು ಹಾಕಿಕೊಳ್ಳುವುದಾಗಿ ಜನಾರ್ದನ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಅವರು,ಈಗಾಗಲೇ ರೆಡ್ಡಿ ನೇಣು ಹಾಕಿಕೊಳ್ಳಬೇಕಿತ್ತು. ಲೋಕಾಯುಕ್ತ ವರದಿಯಲ್ಲಿ ರೆಡ್ಡಿಗಳ ಜಾತಕ ಬಯಲಾಗಿದೆ. ಅಷ್ಟೇ ಅಲ್ಲ, ಅವರು ಎಷ್ಟು ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ಡಿಎಫ್ಓ ನೀಡಿರುವ ನೋಟಿಸ್, ಲೋಕಾಯುಕ್ತ ವರದಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದಕ್ಕೆ ಪುರಾವೆಯಾಗಿದೆ ಎಂದರು.