ಜನ ರೊಚ್ಚಿಗೆದ್ದರೆ ಬಳ್ಳಾರಿಗೆ ಬರಲು ಬಿಡಲ್ಲ: ಶ್ರೀರಾಮುಲು
ಬಳ್ಳಾರಿ, ಬುಧವಾರ, 4 ಆಗಸ್ಟ್ 2010( 11:13 IST )
PR
ನಿಮ್ಮ ರಾಜಕೀಯ ಆಟ ಜನರ ಮುಂದೆ ನಡೆಯಲ್ಲ. ಬಳ್ಳಾರಿ ಬಗ್ಗೆ, ಬಳ್ಳಾರಿ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ರೆ ಅದಕ್ಕೆ ತಕ್ಕ ಬೆಲೆ ತರಬೇಕಾಗುತ್ತದೆ. ಒಂದು ವೇಳೆ ನನ್ನ ಜಿಲ್ಲೆಯ ಜನರು ರೊಚ್ಚಿಗೆದ್ದರೆ ನಿಮ್ಮನ್ನು ಬಳ್ಳಾರಿಗೆ ಬಡಲು ಬಿಡಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಂಗಳವಾರ ಕೂಡ್ಲಗಿಯಲ್ಲಿ ನಡೆದ ಆರನೇ ದಿನದ ಸಾಧನಾ ಸಮಾವೇಶದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮುಲು ಏನು ಎಂಬುದು ಬಳ್ಳಾರಿಯ ಜನರಿಗೆ ಗೊತ್ತು. ಹಾಗಾಗಿ ನನ್ನ ಜನರ ಮೇಲೆ ನನಗೆ ವಿಶ್ವಾಸವಿದೆ. ಒಂದು ವೇಳೆ ಜನ ಸಿಟ್ಟಿಗೆದ್ದರೆ ನೀವು ಬಳ್ಳಾರಿ ಪ್ರವೇಶ ಮಾಡಲು ಸಾಧ್ಯವಾಗಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮುಖಂಡರು ಗಣಿಗಾರಿಕೆ ವಿಷಯವನ್ನೇ ಮುಂದಿಟ್ಟುಕೊಂಡು ರೆಡ್ಡಿ ಸಹೋದರರು ಮತ್ತು ನನ್ನನ್ನು ಗುರಿಯಾಗಿಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ. ಅಲ್ಲದೇ ಗಣಿಗಾರಿಕೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಸಿಬಿಐ ಕಾಂಗ್ರೆಸ್ ಪಕ್ಷದ ಕೈಗೊಂಬೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದರು.
ನಾವು ಕಷ್ಟಪಟ್ಟು ಮೇಲಕ್ಕೆ ಬಂದಿದ್ದೇವೆ. ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಬಂದಿರುವುದು ಎಲ್ಲರಿಗೂ ಗೊತ್ತು. ಆದರೆ ಕಾಂಗ್ರೆಸ್ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಭಯದಿಂದ ಇವತ್ತು ಕಾಂಗ್ರೆಸಿಗರು ಅಕ್ರಮ ಗಣಿಗಾರಿಕೆ ಹೆಸರಿನಲ್ಲಿ ಪಕ್ಷವನ್ನು ಸಂಘಟಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.