ಕಾಂಗ್ರೆಸ್ ನಾಡ ರಕ್ಷಣಾ ನಡಿಗೆ ಪಾದಯಾತ್ರೆಗೆ ಬಂದಿದ್ದ ಮಾಜಿ ಸಂಸದ ಹಾಗೂ ಚಿತ್ರನಟ ಶಶಿಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗುಂಪೊಂದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಸರಕಾರದ ವಿರುದ್ಧದ ಪಾದಯಾತ್ರೆಯು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗೇಟ್ ಬಳಿ ಮಂಗಳವಾರ ಮಧ್ಯಾಹ್ನ 12.15ಕ್ಕೆ ಆಗಮಿಸಿದಾಗ ಈ ಪ್ರಸಂಗ ನಡೆದಿದೆ.
MOKSHA
ಕಾಂಗ್ರೆಸ್‌ನಿಂದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಸೋಲುಂಡ ನಂತರ ಕ್ಷೇತ್ರದ ಕಡೆ ತಿರುಗಿ ನೋಡಿರಲಿಲ್ಲ. ಹಾಗಾಗಿ ಏಕಾಏಕಿ ಪಾದಯಾತ್ರೆಯಲ್ಲಿ ಭಾಗವಹಿಸಲು ಬಂದಿದ್ದ ಶಶಿಕುಮಾರ್ ಅವರನ್ನು ಕಂಡ ಕಾರ್ಯಕರ್ತರು ಆಕ್ರೋಶಭರಿತರಾಗಿ ಹಲ್ಲೆಗೆ ಮುಂದಾದರು.
ಈ ಹೊತ್ತಿನಲ್ಲಿ ತೀವ್ರ ತಳ್ಳಾಟ-ನೂಕಾಟಗಳು ನಡೆದವು. ಘಟನೆಯಿಂದ ತೀವ್ರ ಅಪಮಾನಿತರಾದ ಶಶಿಕುಮಾರ್ ಸೀದಾ ಬೆಂಗಳೂರಿಗೆ ವಾಪಸ್ಸಾಗಲು ನಿರ್ಧರಿಸಿದ್ದರಾದರೂ, ಕೆಲವರ ಬೆಂಬಲದಿಂದ ನಿಲುವು ಬದಲಾಯಿಸಿ ಪಾದಯಾತ್ರೆಯಲ್ಲಿ ಮುಂದುವರಿದ್ದಾರೆ.
ಮತ ಯಾಚಿಸಲು ಬಂದಿದ್ದ ಶಶಿಕುಮಾರ್ ಇಂದು ರಾಜ್ಯಮಟ್ಟದ ನಾಯಕರೊಂದಿಗೆ ಪೋಸ್ ನೀಡಲು ಮತ್ತೆ ಬಂದಿದ್ದಾರೆ. ಇವರು ಕೂಡಲೇ ಇಲ್ಲಿಂದ ತೊಲಗಬೇಕು. ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯ ರೂಪುರೇಷೆಗಳನ್ನು ಸಿದ್ಧಪಡಿಸಿದ್ದೇವೆ ಎಂದ ಕಾರ್ಯಕರ್ತರು, ಕೂಡಲೇ ಹೊರಡಿ ಎಂದು ಘೋಷಣೆ ಕೂಗುತ್ತಾ, ಗಲಾಟೆ ಮಾಡುತ್ತಿದ್ದರು.
ನಾನು ಹೆದರಲ್ಲ... ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಶಶಿಕುಮಾರ್, ಯಾರ ಬೆದರಿಕೆಗಳಿಗೂ ನಾನು ಮಣಿಯುವುದಿಲ್ಲ ಎಂದು ತಿಳಿಸಿದ್ದಾರೆ.
ನನ್ನ ವಿರುದ್ಧ ಕೆಲವರು ಮಾತನಾಡಿದ್ದು, ಘೋಷಣೆ ಕೂಗಿದ್ದು ಹೌದು. ಅವರು ಕಾಂಗ್ರೆಸ್ ಕಾರ್ಯಕರ್ತರೇ ಅಥವಾ ಬೇರೆಯವರೇ ಎಂಬುದು ನನಗೆ ತಿಳಿದಿಲ್ಲ. ಅವರ ಉದ್ದೇಶವೂ ಗೊತ್ತಿಲ್ಲ. ಆದರೆ ನಾನು ಪಾದಯಾತ್ರೆಯಿಂದ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.