ಸ್ನೇಹಿತರೆಲ್ಲ ಜೊತೆಗೂಡಿ ಮಿತ್ರನಿಗೆ ಮದ್ಯಪಾನ ಮಾಡಿಸಿದ ನಂತರ ಜಿಲ್ಲಾ ಆರೋಗ್ಯ ಕೇಂದ್ರದ ವತಿಯಿಂದ ನಡೆಯುತ್ತಿದ್ದ ಸಂತಾನ ಹರಣ ಶಸ್ತ್ರಚಿಕಿತ್ಸೆಯ ಶಿಬಿರದಲ್ಲಿ ಸಂತಾನ ಹರಣ ಮಾಡಿಸಿ ಬೇರೆಯವರ ಹೆಸರಲ್ಲಿ ಹಣ ಪಡೆದು ಪರಾರಿಯಾದ ಅಪರೂಪದ ಘಟನೆ ಬೀದರ್‌ನಲ್ಲಿ ನಡೆದಿದೆ.
ಬೀದರ್‌ನ ಉಸ್ಮಾನಾ ಬಾದಗಂಜಾ ಗ್ರಾಮದ ನಿವಾಸಿ ಅಬ್ದುಲ್ ಹಫೀಜ್ (60) ಎಂಬವರಿಗೆ ಕೆಲವು ಗೆಳೆಯರೆಲ್ಲ ಸೇರಿ ಮದ್ಯಪಾನ ಮಾಡಿಸಿ, ಜಿಲ್ಲಾ ಆರೋಗ್ಯ ಕೇಂದ್ರದ ವತಿಯಿಂದ ನಡೆಯುತ್ತಿದ್ದ (ಜುಲೈ 30) ಸಂತಾನ ಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ದಾಖಲಿಸಿದ್ದರು. ಆದರೆ ಗೆಳೆಯರ ಮೋಸದಾಟದಿಂದ ಹಫೀಜ್ ಸಂತಾನ ಹರಣ ಚಿಕಿತ್ಸೆಗೆ ಈಡಾಗಿದ್ದಾರೆ!
ಹಫೀಜ್ ಅವರನ್ನು ಸಂತಾನ ಹರಣ ಚಿಕಿತ್ಸೆ ಮಾಡಿಸಲು ದಾಖಲಿಸಿ, ನಂತರ ಬೇರೆಯವರ ಹೆಸರಿನಲ್ಲಿ ಸರಕಾರದ ವತಿಯಿಂದ ದೊರೆಯುವ 2,500 ರೂಪಾಯಿ ಪ್ರೋತ್ಸಾಹ ಧನವನ್ನು ಪಡೆದುಕೊಂಡು ಪರಾರಿಯಾಗಿದ್ದಾರೆ.ಹಫೀಜ್‌ಗೆ ತಿಳಿಯದೆ ಸಂತಾನಹರಣ ಚಿಕಿತ್ಸೆ ಮಾಡಿದ ಬಗ್ಗೆ ಕಾರ್ಮಿಕರೆಲ್ಲ ಒಟ್ಟಾಗಿ ವೈದ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಫೀಜ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಏತನ್ಮಧ್ಯೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೈದ್ಯನಾಥ್, ನಾನು ಎಲ್ಲರ ಅನುಮತಿ ಪಡೆದೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿದ್ದೇನೆ. ಬಲವಂತದಿಂದ ಆಪರೇಶನ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅವೆಲ್ಲಕ್ಕಿಂತ ಮುಖ್ಯವಾಗಿ, ಹಫೀಜ್ ಅವರಿಗೆ ಮದ್ಯಪಾನ ಮಾಡಿಸಿ, ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿಯೇ ವೈದ್ಯರು ಸಂತಾನ ಹರಣ ಚಿಕಿತ್ಸೆ ಮಾಡಿಸಿದ್ದು ಯಾಕೆ ಎಂಬುದು ಕಾರ್ಮಿಕರ ಪ್ರಶ್ನೆಯಾಗಿದೆ.