ಅಕ್ರಮ ಗಣಿಗಾರಿಕೆ ಹೆಸರಿನಲ್ಲಿ ಪಾದಯಾತ್ರೆ ನಡೆಸಿ ಬಳ್ಳಾರಿಯಲ್ಲಿ ಗಲಭೆ ಸೃಷ್ಟಿಸುವ ಸಂಚನ್ನು ಕಾಂಗ್ರೆಸ್ ರೂಪಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಗಂಭೀರವಾಗಿ ಆರೋಪಿಸಿದ್ದು, ಈ ಹಿಂದೆ ರಾಮನಗರದಲ್ಲಿ ಗಲಭೆ ಎಬ್ಬಿಸಿ ವೀರೇಂದ್ರ ಪಾಟೀಲ್ ಅವರನ್ನು ಸಿಎಂ ಗಾದಿಯಿಂದ ಕೆಳಗಿಳಿಸಲಾಗಿತ್ತು ಎಂದು ಉದಾಹರಣೆ ಮೂಲಕ ಶಂಕೆ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರು ಪದೇ, ಪದೇ ಏನಾದ್ರು ಗಲಭೆಯಾದ್ರೆ ಅದಕ್ಕೆ ಮುಖ್ಯಮಂತ್ರಿಯೇ ಹೊಣೆ ಎಂದು ಹೇಳುತ್ತಿರುವುದನ್ನು ಗಮನಿಸಿದರೆ, ಕಾಂಗ್ರೆಸಿಗರು ಗಲಭೆ ಸೃಷ್ಟಿಸುವ ವ್ಯವಸ್ಥಿತ ಹುನ್ನಾರ ನಡೆಸಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡರು ನಡೆಸುತ್ತಿರುವ ಪಾದಯಾತ್ರೆ ಬೂಟಾಟಿಕೆ ಎಂದು ಜನರಿಗೆ ತಿಳಿದಿದೆ. ತಮ್ಮ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ರೀತಿಯಲ್ಲಿ ನಾಟಕ ಮಾಡುತ್ತಿರುವುದಾಗಿ ಅವರು ದೂರಿದರು. ಅಲ್ಲದೆ, ಕಾಂಗ್ರೆಸ್ ಪಾದಯಾತ್ರೆಯಿಂದ ಸರಕಾರ ಉರುಳುವುದಿಲ್ಲ. ಅಂತಹ ಭ್ರಮೆ ಕಾಂಗ್ರೆಸ್ ಮುಖಂಡರು ಇಟ್ಟುಕೊಂಡಿದ್ದರೆ ಅದು ಅವರ ಮೂರ್ಖತನ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ವಿರುದ್ಧ ಬಿಜೆಪಿ ನಿರಂತರವಾಗಿ ಸಮರ ಸಾರುತ್ತ ಬಂದಿದೆ, ಇನ್ನು ಮುಂದೆಯೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಏರದಂತೆ ತಡೆಯಲು ಕಾಂಗ್ರೆಸ್ಸೇತರ ಪಕ್ಷಗಳ ಜೊತೆ ಕೈಜೋಡಿಸಲು ಸಿದ್ದ ಎಂದು, ತಾನು ಎಲ್ಲಿಯೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರಕಾರ ನಡೆಸಲು ಸಿದ್ದ ಎಂದಿಲ್ಲ ಎಂದು ಸಮಜಾಯಿಷಿ ನೀಡಿದರು.