ಹೊಸ ಕೊಳವೆಬಾವಿಗಳಿಗೆ ಕಡಿವಾಣ ಹಾಕಿ ಜನರಿಗೆ ಅಗತ್ಯ ಕುಡಿವ ನೀರು ಒದಗಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಡಿವ ನೀರಿಗಾಗಿ ಕೊಳವೆಬಾವಿ ಕೊರೆಯುವುದು ಶಾಶ್ವತ ಪರಿಹಾರವಲ್ಲ. ಇದರಿಂದ ಅಂತರ್ಜಲ ಕುಸಿಯುವುದಲ್ಲದೇ ಹಣವೂ ಪೋಲಾಗುತ್ತಿದೆ. ಹಂತಹಂತವಾಗಿ ಕೊಳವೆ ಬಾವಿಗಳಿಗೆ ಕಡಿವಾಣ ಹಾಕಲು ಸರಕಾರ ಉದ್ದೇಶಿಸಿದೆ ಎಂದು ತಿಳಿಸಿದರು.ಕೊಳವೆಬಾವಿಗಳು ಭೂಮಿಯ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಭೂಮಿಯ ಮೇಲ್ಮೈಯಲ್ಲಿ ದೊರೆವ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ, ಜನರಿಗೆ ಪೂರೈಸುವತ್ತ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಪ್ರಾಮಾಣಿಕವಾಗಿ ಆಗಬೇಕು. ಇದರ ಜಾರಿಗೆ ಗ್ರಾ.ಪಂ. ಸದಸ್ಯರು, ಶಾಸಕರು, ಸಂಸದರು, ಅಧಿಕಾರಿಗಳು ಸಾಥ್ ನೀಡಬೇಕು. ಕೆಲಸ ಮಾಡಿದವರಿಗೆ ಸರಕಾರ ಸರಿಯಾಗಿ ಸಂಬಳ ನೀಡುತ್ತಿದೆ. ಲೋಪ ಕಂಡುಬಂದಲ್ಲಿ ಪರಿಶೀಲನೆ ನಂತರ ಹಣ ಬಿಡುಗಡೆ ಮಾಡುವುದರಿಂದ ಕೆಲವೆಡೆ ವಿಳಂಬವಾಗುತ್ತಿದೆ ಎಂದು ಹೇಳಿದರು.