ಹಣ ಕೊಟ್ಟು ಜನ ಕರೆಸಿ, ಕೋಟ್ಯಂತರ ರೂ. ಖರ್ಚು ಮಾಡುತ್ತಿರುವ ಬಿಜೆಪಿಯ ಸಮಾವೇಶ ಒಂದು ವ್ಯರ್ಥ ಪ್ರಯತ್ನವಷ್ಟೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಮಂಗಳವಾರದ ಹತ್ತನೇ ದಿನದ ಪಾದಯಾತ್ರೆ ಚಳ್ಳಕೆರೆ ಬಳಿಯ ಗೋಪನಹಳ್ಳಿ ಗೇಟ್ ಬಳಿ ತಲುಪಿ ವಿಶ್ರಾಂತಿ ಪಡೆಯುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಧಿಕಾರದಲ್ಲಿದ್ದು ಯಾವ ಉದ್ದೇಶಕ್ಕಾಗಿ ಸಮಾವೇಶ ನಡೆಸುತ್ತಿದ್ದಾರೆ? ಜನರಲ್ಲಿ ಗೊಂದಲ ಮೂಡಿಸಿ ದಾರಿ ತಪ್ಪಿಸುತ್ತಿದ್ದಾರೆ. ಇವರ ನಿಜವಾದ ಬಣ್ಣ ಬಯಲಾಗಿದೆ, ಜನರ ಮುಂದೆ ಬೆತ್ತಲಾಗಿದ್ದಾರೆ ಎಂದು ಬಿಜೆಪಿ ಸಮಾವೇಶವನ್ನು ಗೇಲಿ ಮಾಡಿದರು.
ಬಿಜೆಪಿಯವರು ಮಾಡಿದರೆ ಅದು ಸತ್ಯಾಗ್ರಹ, ನಾವು ಮಾಡಿದರೆ ದೊಂಬರಾಟ. ಪಾದಯಾತ್ರೆಗೆ ಸಿಗುತ್ತಿರುವ ಜನಬೆಂಬಲ ನೋಡಿ ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ದಲಿತರು ನೀಡಲು ಬಂದಿದ್ದ ಮನವಿ ಪಡೆದಿದ್ದರೆ ಇವರ ಗಂಟು ಹೋಗುತ್ತಿತ್ತಾ? ಅವರನ್ನು ಬಂಧಿಸಿ ಜೈಲಿಗೆ ತಳ್ಳಿದ್ದು ಖಂಡನೀಯ. ಈ ಸರಕಾರ ದಲಿತ-ಬಡವ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹರಿಹಾಯ್ದರು.
ಜನಕೊಟ್ಟ ಅಧಿಕಾರವನ್ನು ಜನಪರವಾಗಿ ಚಲಾವಣೆ ಮಾಡಬೇಕು. ಅವರ ಅಹವಾಲುಗಳನ್ನು ಗೌರವದಿಂದ ಕೇಳಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಸರಕಾರ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.