ಸಚಿವ ಶ್ರೀರಾಮುಲು ಅವರಿಗೆ ಕೈಕೋಳ ತೊಡಿಸುವ ಅಣಕು ಪ್ರದರ್ಶನವನ್ನು ಕಾಂಗ್ರೆಸ್ ನಡೆಸಿರುವುದು ಹಿಂಸೆಗೆ ಪ್ರಚೋದನೆ ನೀಡುವ ಕೃತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಮಾತು ಹೇಳಿದ ಮಾತ್ರಕ್ಕೆ ನಾನು ಸಚಿವ ಶ್ರೀರಾಮುಲು ಪರವಾಗಿ ಇರುವೆ ಎಂದು ಭಾವಿಸಬೇಕಾಗಿಲ್ಲ. ಆದರೆ, ಕಾಂಗ್ರೆಸ್ಸಿಗರ ಅಣಕು ಪ್ರದರ್ಶನ ಕಂಡು ಬೇಸರವಾಯಿತು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಗಣಿ ಹಗರಣ ಇರಬಹುದು ಇಲ್ಲವೇ ದೇಶದಲ್ಲಿ ನಡೆದಿರುವ ಯಾವುದೇ ಪ್ರಕರಣಗಳು ಇರಬಹುದು ತನಿಖೆ ನಡೆದರೆ ಕಾಂಗ್ರೆಸ್ ನಾಯಕರ ಕೈಗೆ ಕೈಕೋಳ ತೊಡಿಸಬೇಕಾಗುತ್ತದೆ. ಪಾದಯಾತ್ರೆ ಕೈಗೊಂಡಿರುವ ನಾಯಕರೇ ಕೈಕೋಳ ತೊಡಿಸಿಕೊಳ್ಳುವ ಪರಿಸ್ಥಿತಿ ಬರಬಹುದು ಎಂದರು.
ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ಸಿಗರು ಕೈಕೋಳ ತೊಡಿಸುವಂತಹ ಅಣಕು ಪ್ರದರ್ಶನ ನಡೆಸಿದ್ದು ಅನಾಗರಿಕ ವರ್ತನೆ ಎಂದು ಛೇಡಿಸಿದರು.