ಮಾತು, ವರ್ತನೆ ಮೇಲೆ ಹಿಡಿತವಿರಲಿ: ರೆಡ್ಡಿಗಳಿಗೆ ಆರೆಸ್ಸೆಸ್
ಬೆಂಗಳೂರು, ಗುರುವಾರ, 5 ಆಗಸ್ಟ್ 2010( 10:03 IST )
ಕಾಂಗ್ರೆಸ್ ಪಾದಯಾತ್ರೆಗೆ ಪ್ರತಿಯಾಗಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಪಾದಯಾತ್ರೆ ನಡೆಸುವ ಮೊದಲು ಪಕ್ಷದ ಮುಖಂಡರ ಜತೆ ಚರ್ಚೆ ನಡೆಸದೇ ಇರುವುದು, ವೇದಿಕೆಯಲ್ಲಿ ಏಕವಚನ ಸೇರಿದಂತೆ ಹರಿಯಬಿಡುತ್ತಿರುವ ಓತಪ್ರೋತ ಮಾತುಗಳು ಹಾಗೂ ಪಕ್ಷದ ನಾಯಕ ಬಗ್ಗೆ ಅಸಡ್ಡೆಯನ್ನು ತೋರಿಸುತ್ತಿರುವುದಕ್ಕೆ ಆರೆಸ್ಸೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬುಧವಾರ ಪ್ರವಾಸೋದ್ಯಮ ಸಚಿವ ಬಿ. ಜನಾರ್ದನ ರೆಡ್ಡಿಯನ್ನು ಕರೆಸಿಕೊಂಡ ಆರೆಸ್ಸೆಸ್ ಹಿರಿಯ ನಾಯಕರು ಬಳ್ಳಾರಿ ಸಚಿವರುಗಳ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು ಎಂದು ವರದಿಗಳು ಹೇಳಿವೆ.
ಪಕ್ಷಕ್ಕೆ ನಿಷ್ಠರಾಗಿರಿ... ಬಳ್ಳಾರಿ ರೆಡ್ಡಿಗಳ ಪರ್ತನೆಗೆ ಆರೆಸ್ಸೆಸ್ ಮುಖ್ಯಸ್ಥ ಎಂ.ಸಿ. ಜಯದೇವ್ ಅವರ ಜತೆ 'ಕೇಶವ ಕೃಪಾ'ದಲ್ಲಿ ನಡೆದ ಮಾತುಕತೆಯಲ್ಲಿ ಖಾರವಾಗಿ ಉತ್ತರಿಸಿರುವ ಮುಖಂಡರು, ನಿಮ್ಮ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ; ತಿದ್ದಿಕೊಂಡು ಹೋಗಬೇಕಾಗಿರುವುದು ನೀವು. ಜನಸಾಮಾನ್ಯರಲ್ಲಿ ಗೌರವ ಬರುವ ಹಾಗೆ ನಡೆದುಕೊಳ್ಳಬೇಕು. ಮೊದಲು ನೀವು ಜನರ ಜತೆ ಗುರುತಿಸಿಕೊಳ್ಳಬೇಕು. ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಡೆಂಗ್ಯೂ, ಚಿಕುನ್‌ಗುನ್ಯಾ ಸೇರಿದಂತೆ ಆರೋಗ್ಯ ಸಮಸ್ಯೆಗಳು ತೀವ್ರವಾಗತೊಡಗಿವೆ. ಆದರೆ ಆರೋಗ್ಯ ಸಚಿವರೆನಿಸಿಕೊಂಡ ಶ್ರೀರಾಮುಲು ತಲೆ ಬೋಳಿಸಿಕೊಂಡು ಬೀದಿಯಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಅತ್ತ ಕಂದಾಯ ಸಚಿವರು ನೆರೆ ಪೀಡಿತ ಪ್ರದೇಶಗಳತ್ತ ಗಮನ ಹರಿಸುವ ಬದಲು ಯಾತ್ರೆಯಲ್ಲಿ ಮುಳುಗಿದ್ದಾರೆ. ನೀವು ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು ಕಡೆಗಣಿಸಿ ಗಣಿ ವಿವಾದದಲ್ಲಿ ಮುಳುಗಿದ್ದೀರಿ. ಇವುಗಳನ್ನೆಲ್ಲ ಕಡೆಗಣಿಸಿ ನೀವು ಮಾಡಹೊರಟಿರುವುದಾದರೂ ಏನನ್ನು ಮತ್ತು ನಿಜವಾಗಿ ಯಾರ ವಿರುದ್ಧ ಎಂದೂ ರೆಡ್ಡಿಗಳನ್ನು ಮುಖಂಡರು ಪ್ರಶ್ನಿಸಿದ್ದಾರೆ.
ಬಿಜೆಪಿಯಲ್ಲೇ ನೀವು ಪ್ರತ್ಯೇಕ ಗುಂಪನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದೀರಿ. ಆ ಮೂಲಕ ನೀವು ಪಕ್ಷದಲ್ಲಿ ಬಿರುಕುಂಟು ಮಾಡುವತ್ತ ಹೆಜ್ಜೆ ಹಾಕುತ್ತಿದ್ದೀರಿ. ನಿಮ್ಮಿಂದಾಗಿ ಪಕ್ಷಕ್ಕೆ ಕೆಟ್ಟ ಹೆಸರೂ ಬರುತ್ತಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಿ ಎಂದು ಆರೆಸ್ಸೆಸ್ ಬುದ್ಧಿಮಾತು ಹೇಳಿದೆ ಎನ್ನಲಾಗಿದೆ.
ಸಿಎಂ ವಿರುದ್ಧ ದೂರು... ನಮ್ಮಿಂದ ಯಾವ ತಪ್ಪೂ ಆಗಿಲ್ಲ. ಆದರೂ ನಮ್ಮನ್ನೇ ಗುರಿಯಾಗಿಟ್ಟುಕೊಂಡು ಅಪಪ್ರಚಾರ ನಡೆಸಲಾಗುತ್ತಿದೆ. ನಾವು ಪಕ್ಷಕ್ಕಾಗಿ ದುಡಿದವರು. ಸರಕಾರಕ್ಕೆ ನೆರವಾದವರೇ ನಾವು. ಪಕ್ಷದೊಳಗೂ ನಮಗೆ ಆಗದವರಿದ್ದಾರೆ. ಇದನ್ನೆಲ್ಲ ಸರಿಪಡಿಸಬೇಕು ಎಂದು ಜನಾರ್ದನ ರೆಡ್ಡಿ ತನ್ನ ಕಷ್ಟವನ್ನು ಈ ಸಂದರ್ಭದಲ್ಲಿ ವಿವರಿಸಿದ್ದಾರೆ.
ಶ್ರೀರಾಮುಲು ಕೇಶಮುಂಡನ ಸೇರಿದಂತೆ ಬಳ್ಳಾರಿ ಸಚಿವರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವಕಾಶ ಸಿಕ್ಕಾಗಲೆಲ್ಲ ತಮ್ಮ ಅಸಮಾಧಾನವನ್ನು ತೋರಿಸಿಕೊಳ್ಳುತ್ತಿದ್ದಾರೆ. ಅವರಿಗೂ ಬುದ್ಧಿ ಹೇಳಬೇಕು ಎಂದು ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿಯವರು ನಮ್ಮ ವಿರುದ್ಧ ದ್ವೇಷ ತೀರಿಸಿಕೊಳ್ಳುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಅವರಿಗೂ ತಿಳಿ ಹೇಳಿ. ಸಂಪುಟದ ಕೆಲವು ಸಚಿವರು ನಮ್ಮ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದರೂ ಪಕ್ಷದ ಮುಖಂಡರು ಸುಮ್ಮನಿದ್ದಾರೆ. ಬದಲಿಗೆ ನಮಗೆ ಬುದ್ಧಿ ಹೇಳುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ತನ್ನ ಕಷ್ಟಗಳನ್ನು ಹೇಳಿಕೊಂಡರು.
ಆದರೆ ಇದಕ್ಕೆಲ್ಲ ಹೆಚ್ಚಿನ ತಲೆಕೆಡಿಸಿಕೊಳ್ಳದ ಆರೆಸ್ಸೆಸ್ ಮುಖಂಡರು, ಮೊದಲು ನೀವು ವಿಶ್ವಾಸವನ್ನು ವೃದ್ಧಿಸುವ ರೀತಿಯಲ್ಲಿ ನಡೆದುಕೊಳ್ಳಿ ಎಂದು ಸಲಹೆ ನೀಡಿದರು ಎಂದು ಹೇಳಲಾಗಿದೆ.
ಆರೆಸ್ಸೆಸ್ ಹಿರಿಯರು ನಮ್ಮ ಗುರುಗಳು... ಹೀಗೆಂದು ಪ್ರತಿಕ್ರಿಯಿಸಿರುವುದು ಜನಾರ್ದನ ರೆಡ್ಡಿ. ಮಾತುಕತೆ ಮುಗಿಸಿದ ನಂತರ ಹೊರಗಡೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಆರೆಸ್ಸೆಸ್ ಹಿರಿಯರು ನಮಗೆ ಗುರುಗಳು. ಆರೆಸ್ಸೆಸ್ ಆಶೀರ್ವಾದದಿಂದಾಗಿ ನಾವು ಇಂದು ಈ ಸ್ಥಾನದಲ್ಲಿದ್ದೇವೆ. ಅವರನ್ನು ಭೇಟಿ ಮಾಡುವುದು ನಮ್ಮ ನಿರಂತರ ಪ್ರಕ್ರಿಯೆ. ಭೇಟಿ ಸಂದರ್ಭದಲ್ಲಿ ಅವರಿಂದ ಅನೇಕ ಸಲಹೆ-ಸೂಚನೆಗಳನ್ನು ಪಡೆದಿದ್ದೇನೆ. ಇದಕ್ಕೆ ವಿಶೇಷ ಅರ್ಥವನ್ನು ಕಲ್ಪಿಸಬೇಕಾಗಿಲ್ಲ ಎಂದರು.
ಅಲ್ಲದೆ ಮುಖ್ಯಮಂತ್ರಿ ಸೇರಿದಂತೆ ಯಾರನ್ನು ಭೇಟಿ ಮಾಡಿದರೂ ಅದಕ್ಕೆ ಇಲ್ಲಸಲ್ಲದ ಅರ್ಥಕಲ್ಪಿಸಿ ಗೊಂದಲ ಸೃಷ್ಟಿಸಬೇಡಿ ಎಂದು ರೆಡ್ಡಿ ಮಾಧ್ಯಮಗಳಲ್ಲೂ ಮನವಿ ಮಾಡಿಕೊಂಡರು.