ಕಾಂಗ್ರೆಸ್ ಮುಖಂಡರನ್ನು ಬಳ್ಳಾರಿಗೆ ಕಾಲಿಡಲು ಬಿಡುವುದಿಲ್ಲ ಎನ್ನಲು ಬಳ್ಳಾರಿ ಶ್ರೀರಾಮುಲು ಪಿತ್ರಾರ್ಜಿತ ಆಸ್ತಿಯೇ?ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
11ನೇ ದಿನದ ಪಾದಯಾತ್ರೆ ಆರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತವ ವ್ಯವಸ್ಥೆಯಲ್ಲಿ ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು. ಆದರೆ ಶ್ರೀರಾಮುಲು ಅವರ ಹೇಳಿಕೆಯನ್ನು ಗಮನಿಸಿದರೆ ಬಳ್ಳಾರಿಯಲ್ಲಿ ಅವರ ಗೂಂಡಾಗಿರಿ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ನಮ್ಮನ್ನು ಬಳ್ಳಾರಿಗೆ ಬರಲು ಬಿಡುವುದಿಲ್ಲ ಎನ್ನಲು ಅವರೇನು ಬಳ್ಳಾರಿಯನ್ನು ಖರೀದಿಸಿದ್ದಾರ ಎಂದು ಖಾರವಾಗಿ ಪ್ರಶ್ನಿಸಿದ ಸಿದ್ದರಾಮಯ್ಯ, ಆಪರೇಶನ್ ಯುಗ ಮುಗಿದಿದೆ. ಕಾಂಗ್ರೆಸ್‌ನಲ್ಲಿ ಈಗ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಿದೆ. ಪಾದಯಾತ್ರೆಗೆ ದೊರೆಯುತ್ತಿರುವ ಬೆಂಬಲ ಗಮನಿಸಿರುವ ಮುಖ್ಯಮಂತ್ರಿಗಳಿಗೆ ನಡುಕ ಉಂಟಾಗಿದೆ. ಸರಕಾರ ಎಲ್ಲಿ ಬಿದ್ದುಹೋಗುತ್ತದೆಯೋ ಎಂಬ ಭಯದಿಂದ ನಮ್ಮ ಮೇಲೆ ಹರಿಹಾಯುತ್ತಿದ್ದಾರೆ ಎಂದರು.
ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಈ ಬೃಹತ್ ಹೋರಾಟ ಹಮ್ಮಿಕೊಂಡಿಲ್ಲ. ನಾಡ ರಕ್ಷಣೆಗಾಗಿ ಈ ಪಾದಯಾತ್ರೆ ಆರಂಭಗೊಂಡಿದೆ. ಅದಕ್ಕೆ ಜನಬೆಂಬಲವೂ ದೊರೆತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.