ಮೂಢನಂಬಿಕೆ ಎಂತಹ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಮೂಢನಂಬಿಕೆಗೆ ಗಂಟುಬಿದ್ದ ತಂಗಿಯೊಬ್ಬಳು ಹಬ್ಬಿಸಿದ ಸಾವಿನ ಸುದ್ದಿ ತನ್ನ ಅಣ್ಣನನ್ನೇ ಬಲಿತೆಗೆದುಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಈ ವಿಚಿತ್ರ ಘಟನೆ ನಡೆದಿರುವುದು ದಾವಣಗೆರೆ ನಗರ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ತಂಗಿಯ ಮೇಲೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದ ಅಣ್ಣ ಸುಳ್ಳು ಸುದ್ದಿ ನಂಬಿ ಅಣ್ಣಹಳೇ ಚಿಕ್ಕನಹಳ್ಳಿ ಬಡಾವಣೆ ಹರಳಯ್ಯ ಕಾಲೋನಿಯ ಗೋಣಪ್ಪ ಸಾವಿಗೆ ಶರಣಾಗಿದ್ದಾರೆ.
ಘಟನೆ ವಿವರ: ತಂಗಿ ಲಕ್ಷ್ಮಮ್ಮ ದಾರಿಯಲ್ಲಿ ಸಾಗುತ್ತಿದ್ದ ವೇಳೆ ಹಾವುಗಳ ಮಿಲನ ದೃಶ್ಯವನ್ನು ಕಂಡಿದ್ದಳು. ಹಾವಿನ ಮಿಲನ ದೃಶ್ಯ ನೋಡಿದವರು ಪಾಪ ಪರಿಹಾರಕ್ಕಾಗಿ ತಮ್ಮದೇ ಸಾವಿನ ಸುದ್ದಿಯನ್ನು ಸಂಬಂಧಿಕರಿಗೆ ತಿಳಿಸಬೇಕೆಂಬ ಮೂಢನಂಬಿಕೆ ಈ ಭಾಗದಲ್ಲಿದೆ. ಅದರಂತೆ ಲಕ್ಷ್ಮಮ್ಮ ಯಾರದೋ ಮೊಬೈಲ್ ಮೂಲಕ ಅಣ್ಣ ಗೋಣಪ್ಪನಿಗೆ ಸಾವಿನ ಸುದ್ದಿ ತಿಳಿಸಿದ್ದಳು.
ತನ್ನ ತಂಗಿ ಸಾವನ್ನಪ್ಪಿದ್ದಾಳೆ ಎಂಬ ಸುಳ್ಳು ಸುದ್ದಿಯಿಂದ ಆಘಾತಗೊಂಡ ಗೋಣಪ್ಪ ಹಿಂದು-ಮುಂದೆ ಆಲೋಚಿಸದೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.