ವಿರೋಧ ಪಕ್ಷಗಳ ಸುಳ್ಳಿನ ಟೀಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೆರೆ ಸಂತ್ರಸ್ತರಿಗೆ ದಾನಿಗಳ ಸಹಾಯದೊಂದಿಗೆ ಉತ್ತಮ ಮನೆಗಳನ್ನು ರಾಜ್ಯ ಸರಕಾರ ನಿರ್ಮಿಸಿಕೊಡುತ್ತಿದ್ದು, 297 ನವಗ್ರಾಮದಲ್ಲಿ 62 ಸಾವಿರ ಮನೆ ನಿರ್ಮಿಸುತ್ತಿದೆ ಎಂದರು.
ಇಲ್ಲಿನ ಡೊಂಗಾರಾಂಪುರ ಗ್ರಾಮದ ಸಮೀಪದ ನೆರೆಪೀಡಿತ ಕುರವಕುರ್ದ ಹಾಗೂ ಮಂಗಿಗಡ್ಡ ಗ್ರಾಮಸ್ಥರ ಪುನರ್ವಸತಿಗಾಗಿ ಆಸರೆ ಯೋಜನೆಯಡಿ ಮಾತಾ ಅಮೃತಾನಂದಮಯಿ ಮಠ ನಿರ್ಮಿಸಿದ 242 ಮನೆಗಳ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನಾವಶ್ಯಕವಾಗಿ ಟೀಕಿಸುವವರಿಗೆ ನಾವು ಉತ್ತರ ನೀಡುವುದಿಲ್ಲ. ನೆರೆ ಸಂತ್ರಸ್ತರಿಗೆ ಸರಕಾರ ನೆರವಾದ ಪರಿ ಇಡೀ ದೇಶದಲ್ಲಿಯೇ ದೊಡ್ಡ ಸಾಧನೆಯಾಗಿದೆ ಎಂದರು.
ಮುಖ್ಯಮಂತ್ರಿಗಳಿಗೆ ಸಾಂಕೇತಿಕವಾಗಿ ಮನೆ ಕೀಲಿ ಕೈ ಹಸ್ತಾಂತರ ಮಾಡಿದ ಮಾತಾ ಅಮೃತಾನಂದಮಯಿ ಶಿಷ್ಯರಾದ ಸ್ವಾಮಿ ಅಮೃತಾ ಗೀತಾನಂದಪುರಿ ಮಾತನಾಡಿ, ಜಗತ್ತಿನಾದ್ಯಂತ ಸಂಕಷ್ಟದಲ್ಲಿರುವ ಜನತೆಗೆ ಮಾತಾ ಅಮೃತಾನಂದಮಯಿ ಆಶೀರ್ವಾದದಿಂದ ಮಠವು ನೆರವಿಗೆ ಧಾವಿಸಿದೆ. ನೆರೆ ಪ್ರವಾಹ ಎದುರಾಗಿ ಸಂಕಷ್ಟಕ್ಕೆ ನೆರವಾಗಲು ಅಮ್ಮನ ಭಕ್ತರು, ಶಿಷ್ಯ ವೃಂದ ಧಾವಿಸಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದು,ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಹೇಳಿದರು.