ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಪಕ್ಷ ನಾಯಕನ ಸ್ಥಾನ ಉಳಿಸಿಕೊಳ್ಳಲು ಸಿದ್ದು ಯಾತ್ರೆ: ಸಿಎಂ (BJP | Yeddyurappa | Congress | Siddaramaiah | KPCC | Rajnath singh)
ವಿಪಕ್ಷ ನಾಯಕನ ಸ್ಥಾನ ಉಳಿಸಿಕೊಳ್ಳಲು ಸಿದ್ದು ಯಾತ್ರೆ: ಸಿಎಂ
ಗುಲ್ಬರ್ಗದಲ್ಲಿ ಎರಡನೇ ಸಮಾವೇಶ...
ಕಲ್ಬುರ್ಗಿ, ಗುರುವಾರ, 5 ಆಗಸ್ಟ್ 2010( 20:07 IST )
ಕಾಂಗ್ರೆಸ್ ಹೈಕಮಾಂಡ್‌ನ ಅನುಕಂಪ ಗಿಟ್ಟಿಸಿಕೊಂಡು ಕೊನೆ ಪಕ್ಷ ವಿಪಕ್ಷ ನಾಯಕನ ಸ್ಥಾನವನ್ನಾದರೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಯುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿಯ ಎರಡನೇ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅನಾವಶ್ಯಕವಾಗಿ ಅಕ್ರಮ ಗಣಿ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿದೆ. ಕಾಂಗ್ರೆಸ್ ಮುಖಂಡರ ನಿಜವಾದ ಉದ್ದೇಶ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಾಗಿದೆ ಎಂದು ತಿರುಗೇಟು ನೀಡಿದರು.
ಅಲ್ಲದೇ, ರಾಜಧಾನಿಯಲ್ಲಿ 15 ದಿನಗಳ ಕಾಲ ವಾಸ್ತವ್ಯ, ಉಳಿದ 15ದಿನಗಳ ಕಾಲ ಸರಕಾರದ ಸಾಧನೆಯನ್ನು ಜನರ ಮುಂದಿಡುವ ನಿಟ್ಟಿನಲ್ಲಿ ಸಮಾವೇಶಗಳಲ್ಲಿ ಭಾಗಿಯಾಗುವುದಾಗಿ ಘೋಷಿಸಿದರು. ಆಗಸ್ಟ್ 23ರಂದು ಕಲ್ಬುರ್ಗಿಯಲ್ಲಿ ಸಚಿವ ಸಂಪುಟ ನಡೆಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಗುಲ್ಬರ್ಗದಲ್ಲಿ ನಡೆದ ರೀತಿಯಲ್ಲೇ ಪ್ರತಿ ಜಿಲ್ಲೆಯಲ್ಲಿಯೂ ಜನಜಾಗೃತಿ ಸಮಾವೇಶ ನಡೆಸುವ ಸಂಕಲ್ಪ ತೊಟ್ಟಿರುವುದಾಗಿ ತಿಳಿಸಿದರು. ಆ ನೆಲೆಯಲ್ಲಿ ಆ.25ರಂದು ಬೆಳಗಾವಿ, 26ರಂದು ವಿಜಾಪುರ, 27ರಂದು ಬಾಗಲಕೋಟೆಯಲ್ಲಿ ಸಮಾವೇಶ ಆಯೋಜಿಸಲಾಗಿದ್ದು ಎಂದ ಮುಖ್ಯಮಂತ್ರಿಗಳು, ನೆರೆ ಸಂತ್ರಸ್ತರಿಗೆ ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ದಾನಿಗಳು ನೀಡಿದ ವಾಗ್ದಾನದಂತೆ ಹಣ ನೀಡದೇ ಇರುವುದರಿಂದ ಕೆಲವೆಡೆ ಕಾಮಗಾರಿ ವಿಳಂಬವಾಗುತ್ತಿದೆ. ದಾನಿಗಳು ಮುಂದೆ ಬಂದಲ್ಲಿ ಸರಕಾರವೇ ಮನೆಗಳನ್ನು ನಿರ್ಮಿಸಲಿದೆ ಎಂದರು.
ಬೃಹತ್ ಸಮಾವೇಶದಲ್ಲಿ ಪಕ್ಷದ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್, ಸಂಸದ ಅನಂತಕುಮಾರ್, ಸಚಿವರಾದ ರೇವೂ ನಾಯಕ್ ಬೆಳಮಗಿ, ಕಟ್ಟಾ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಕಾರ್ಯಕರ್ತ ಹೃದಯಾಘಾತದಿಂದ ಸಾವು: ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಆತನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆಯೇ ಸಾವನ್ನಪ್ಪಿರುವ ಘಟನೆ ನಡೆಯಿತು. ಬಿಜೆಪಿ ಕಾರ್ಯಕರ್ತ ಸಮಾವೇಶದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದ ಪರಿಣಾ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು. ಕೂಡಲೇ ಅಸ್ವಸ್ಥ ಕಾರ್ಯಕರ್ತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆದಲ್ಲಿಯೇ ಆತ ಸಾವನ್ನಪ್ಪಿದ್ದಾರೆ.