ಗಾಂಧಿ, ನೆಹರು ತತ್ವ ಪ್ರತಿಪಾದನೆಗೆ ಪಾದಯಾತ್ರೆ: ರಮೇಶ್ ಕುಮಾರ್
ಚಿತ್ರದುರ್ಗ, ಗುರುವಾರ, 5 ಆಗಸ್ಟ್ 2010( 19:38 IST )
ಗಾಂಧೀಜಿಯವರ ಅಹಿಂಸೆ, ಸಮಾನತೆ ತತ್ವ ಹಾಗೂ ನೆಹರೂ ಆಡಳಿತ ವಾತಾವರಣವನ್ನು ರಾಜ್ಯದಲ್ಲಿ ಮರಳಿ ತರುವುದು ಕಾಂಗ್ರೆಸ್ ಪಾದಯಾತ್ರೆ ಮೂಲ ಗುರಿ ಎಂದು ವಿಧಾನಸಭೆ ಮಾಜಿ ಸಭಾಪತಿ ರಮೇಶಕುಮಾರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ತಾಲೂಕು ತಳಕಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ, ಗೂಂಡಾ ಸಂಸ್ಕೃತಿ ವಿರುದ್ಧ ಗುರಿ ಮುಟ್ಟುವವರೆಗೆ ಹೋರಾಟ ನಿರಂತರ. ತಪ್ಪು ಮಾಡಿದ ರೆಡ್ಡಿಗಳು, ಸರಕಾರ ನಾಡಿನ ಜನತೆ ಕ್ಷಮೆ ಯಾಚಿಸಬೇಕು ಎಂದರು.
ಕಾಂಗ್ರೆಸ್ ಮರು ಹುಟ್ಟು ಪಡೆಯಲು ಇಂಥದೊಂದು ಹೋರಾಟದ ಅವಶ್ಯಕತೆ ಇತ್ತು. ಅದನ್ನು ರೆಡ್ಡಿಗಳು, ಮುಖ್ಯಮಂತ್ರಿಗಳು ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಮುಖಂಡರಲ್ಲಿನ ಒಳಜಗಳ, ಗೊಂದಲಗಳಿಂದ ಪಕ್ಷ ದಿನೇ ದಿನೇ ನೆಲೆ ಕಳೆದುಕೊಳ್ಳುತ್ತಿತ್ತು. ಇದನ್ನು ಬಂಡವಾಳ ಮಾಡಿಕೊಂಡ ಬಿಜೆಪಿ, ಶಾಸಕರು, ಸಂಸದರನ್ನು ಖರೀದಿಸಿತು. ದಮ್ ಇದ್ದರೆ ಈಗ ಆ ಸಾಹಸಕ್ಕೆ ಕೈ ಹಾಕಲಿ ಎಂದು ಸವಾಲು ಹಾಕಿದರು.
ನಾಡ ರಕ್ಷಣೆ ನಡಿಗೆಗೆ ಜನಸ್ಪಂದನ ನೋಡಿ ಉಲ್ಲಾಸ ಆಗುತ್ತಿದೆ. ಜನತೆಯ ಮನಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇವೆ ಎಂಬ ಆತ್ಮ ಸಂತೋಷ ನಮಗಿದೆ ಎಂದರು.