ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ರಾತೋರಾತ್ರಿ ಯಾರಿಗೂ ಗೊತ್ತಾಗದಂತೆ ಕಳ್ಳರಂತೆ ಕರೆತಂದು ಬಳ್ಳಾರಿಯಲ್ಲಿ ಕಣಕ್ಕಿಳಿಸಿದರು. ಆದರೆ ಈ ಕುರಿತು ಕನಿಷ್ಟ ಕೃತಜ್ಞತೆಯನ್ನೂ ಮೆರೆಯದ ಸೋನಿಯಾ ನಂತರ ರಾಜೀನಾಮೆ ನೀಡಿದರು ಎಂದು ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ರಾಷ್ಟ್ರೀಯ ಪಕ್ಷವಾಗಿದ್ದರೂ ಕಾಂಗ್ರೆಸ್ಸಿಗರಿಗೆ ಸ್ವಾಭಿಮಾನವಿಲ್ಲ. ಎಲ್ಲವನ್ನೂ ಕಳ್ಳರಂತೆ ನಿಭಾಯಿಸುತ್ತಾರೆ ಎಂದು ಲೇವಡಿ ಮಾಡಿದರು.
1999ರಲ್ಲಿ ರಾತೋರಾತ್ರಿ ಯಾರಿಗೂ ತಿಳಿಯದಂತೆ ಕಳ್ಳತನದಿಂದ ಸೋನಿಯಾರನ್ನು ಬಳ್ಳಾರಿಗೆ ಕರೆತಂದರು. ಚುನಾವಣೆಯಲ್ಲಿ ಗೆದ್ದ ನಂತರ ಜನತೆಗೆ ಧನ್ಯವಾದವನ್ನಾದರೂ ಅವರು ಹೇಳಬೇಕಿತ್ತು. ಆದರೆ ಸೋನಿಯಾ ಬಳ್ಳಾರಿಗೆ ಬರಲೇ ಇಲ್ಲ. ಜನರಿಗೆ ದ್ರೋಹವೆಹಸಿ ರಾಜೀನಾಮೆ ನೀಡಿದರು. ಇದು ಕಾಂಗ್ರೆಸ್ ನೀತಿ ಎಂದು ಕಟಕಿಯಾಡಿದರು ಜನಾರ್ದನ ರೆಡ್ಡಿ.
1999ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಅವರು ಬಳ್ಳಾರಿ ಮತ್ತು ಅಮೇಠಿಯಿಂದ ಸ್ಪರ್ಧಿಸಿದ್ದರು. ಎರಡೂ ಕಡೆ ಗೆಲುವು ಸಾಧಿಸಿದ್ದರಿಂದ, ಬಳ್ಳಾರಿ ಕ್ಷೇತ್ರದಲ್ಲಿ ರಾಜೀನಾಮೆ ನೀಡಿ ಸ್ವಕ್ಷೇತ್ರವನ್ನು ಅಪ್ಪಿಕೊಂಡಿದ್ದರು.
ಅದೇ ಹೊತ್ತಿಗೆ ಸುಷ್ಮಾ ಸ್ವರಾಜ್ ಅವರನ್ನು ರೆಡ್ಡಿ ಅಪಾದಮಸ್ತಕ ಹೊಗಳಿದ್ದಾರೆ. ಬಿಜೆಪಿ ನಾಯಕಿ ಬಳ್ಳಾರಿಯಲ್ಲಿ ಸೋಲುಂಡರೂ ಅದನ್ನು ವಿನಮ್ರವಾಗಿ ಸ್ವೀಕರಿಸಿದ್ದಲ್ಲದೆ, ಎಂದೆಂದೂ ಈ ಕ್ಷೇತ್ರವನ್ನು ಮರೆಯುವುದಿಲ್ಲ ಎಂದು ಶಪಥ ಮಾಡಿದರು. ಅದರಂತೆ ಕಳೆದ 11 ವರ್ಷಗಳಿಂದ ಪ್ರತಿವರ್ಷ ವರಮಹಾಲಕ್ಷ್ಮಿ ಪೂಜೆಗೆ ಬರುತ್ತಿದ್ದಾರೆ. ಅದೇ ಕಾರಣಕ್ಕಾಗಿ ಈಗ ಬಳ್ಳಾರಿ ಬಿಜೆಪಿ ಕೋಟೆಯಾಗಿದೆ ಎಂದರು.
ಕಾಂಗ್ರೆಸ್ಸಿಗರಿಗೆ ಏನೂ ಮಾಡಬೇಡಿ... ಕಾಂಗ್ರೆಸ್ ನಡೆಸಲಿರುವ ಆಗಸ್ಟ್ 9ರ ಬಳ್ಳಾರಿ ಸಮಾವೇಶದ ಕುರಿತು ಬಳ್ಳಾರಿಯಲ್ಲಿ ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಜನಾರ್ದನ ರೆಡ್ಡಿ, ಸಮಾವೇಶಕ್ಕೆ ಎಲ್ಲಾ ರೀತಿಯ ಬಂದೋಬಸ್ತ್ ಮಾಡಲಾಗಿದೆ ಎಂದರು.
ಅಲ್ಲದೆ ಕಾಂಗ್ರೆಸ್ ನಾಯಕರು ಮಾಡುವ ಪ್ರಚೋದನಾಕಾರಿ ಭಾಷಣಕ್ಕೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸುವ ಗೋಜಿಗೆ ಹೋಗದೆ, ತಾಳ್ಮೆಯಿಂದ ಇರಬೇಕು. ಆ ಮೂಲಕ ಬಳ್ಳಾರಿಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದು ಕಾರ್ಯಕರ್ತರಲ್ಲಿ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಜಲಾನಯನ ಅಧಿಕಾರಿಗಳನ್ನು ವಿಶೇಷ ದಂಡಾಧಿಕಾರಿಗಳನ್ನಾಗಿ ನೇಮಿಸಲಾಗುತ್ತದೆ. ಇಬ್ಬರು ಎಸ್‌ಪಿ, ಐದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, 19 ಡಿಎಸ್‌ಪಿ, 71 ಸಿಪಿಐ, 160 ಎಸ್‌ಐ, 250 ಎಎಸ್ಐ, 3000 ಪೊಲೀಸ್ ಪೇದೆಗಳು, 150 ಮಹಿಳಾ ಪೊಲೀಸ್ ಪೇದೆಗಳನ್ನು ಬಳ್ಳಾರಿ ಸಮಾವೇಶಕ್ಕಾಗಿ ನಿಯೋಜಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕಾಂಗ್ರೆಸ್ಸಿಗರು ಗಲಭೆ ಹುಟ್ಟಿಹಾಕಲು ಕುತಂತ್ರ ನಡೆಸಲಿದ್ದಾರೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಸಂಪೂರ್ಣ ಕಾರ್ಯಕ್ರಮದ ವೀಡಿಯೋ ಚಿತ್ರೀಕರಣ ನಡೆಸಲಾಗುತ್ತದೆ. ಅವರ ಪ್ಲೆಕ್ಸ್‌ಗಳಿಗೆ ಜಾಗ ಬಿಟ್ಟುಕೊಡುವ ನಿಟ್ಟಿನಲ್ಲಿ ಬಿಜೆಪಿ ಬ್ಯಾನರುಗಳು ಅಡ್ಡಿಯಾಗುವುದಿದ್ದರೆ ತೆಗೆಯಲು ಸೂಚಿಸಲಾಗಿದೆ. ಸಮಾವೇಶಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.