ಹೈದರಬಾದ್-ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಗುಲ್ಬರ್ಗದಲ್ಲಿ ಆಗಸ್ಟ್ 23ರಂದು ಸಚಿವ ಸಂಪುಟದ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಈ ಕುರಿತು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಇಲ್ಲಿ ಸಂಪುಟ ಸಭೆ ನಡೆಸಲು ಈ ಮೊದಲೇ ನಿರ್ಧರಿಸಲಾಗಿತ್ತು. ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ದಿನಾಂಕ ತೀರ್ಮಾನಿಸಲಾಗಿದೆ ಎಂದರು.
ಬೀದರ್ ಜಿಲ್ಲೆಯ ಔರಾದ್ ತಾಲೂಕು ಕುಂದಗೋಳ ಗ್ರಾಮದ ಸಾವಯವ ಕೃಷಿಕರೊಬ್ಬರ ಮನೆಯಲ್ಲಿ 28ರಂದು ರಾತ್ರಿ ವಾಸ್ತವ್ಯ ಮಾಡಲಾಗುವುದು. ಸಾವಯವ ಕೃಷಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಒಂದೊಂದು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಈ ಕಾರ್ಯಕ್ರಮ ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.
ಬಿಜೆಪಿ ಸರಕಾರದ ಎರಡು ವರ್ಷದ ಅವಧಿಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಗುಲ್ಬರ್ಗ ಮಹಾನಗರ ಪಾಲಿಕೆಗೆ 100 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು, ಈ ಪೈಕಿ 50 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.
ಪುರಸಭೆ, ನಗರಸಭೆ, ಪಾಲಿಕೆಗಳು ತಮ್ಮ ಸಂಪನ್ಮೂಲದಿಂದ ಜನತೆಗೆ ಕುಡಿಯುವ ನೀರು, ಬೀದಿ ದೀಪ, ಚರಂಡಿ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಿಕೊಡಬೇಕು. ಬೃಹತ್ ಕೆಲಸಗಳಿಗೆ ಮಾತ್ರ ಸರಕಾರ ಹಣ ನೀಡುತ್ತದೆ. ವಾರ್ಡ್‌ವಾರು ಹಣ ನೀಡಲು ಆಗೋದಿಲ್ಲ ಎಂದು ಸ್ಪಷ್ಟಪಡಿಸಿದರು.