ರಾಜ್ಯದ ಜನ ಬಿಜೆಪಿಯತ್ತ ಹರಿದುಬರುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಮುಖಂಡರು ಅಧಿಕಾರದ ಕನಸು ಕಾಣುವುದನ್ನು ಕೈಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಬಡವರು, ಮಧ್ಯಮವರ್ಗ, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಹೀಗೆ ಎಲ್ಲ ವರ್ಗದವರ ಕಲ್ಯಾಣ ಯೋಜನೆ ರೂಪಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಯಾಕ್ರಿ ಕೊಡಬೇಕು ಎಂದು ಪ್ರಶ್ನಿಸಿದರು.
ಗುಲ್ಬರ್ಗ ಶ್ರೀನಿವಾಸ ಸರಡಗಿ ಗ್ರಾಮದ ಬಳಿ ವಿಮಾನ ನಿಲ್ದಾಣ ಸ್ಥಳದಲ್ಲಿ ನಡೆದ ಬಿಜೆಪಿ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಲೋಕಸಭೆ ಚುನಾವಣೆ 25 ಸ್ಥಾನಗಳ ಪೈಕಿ 19 ಬಿಜೆಪಿಗೆ ಬಂದವು. ಬೆಂಗಳೂರು ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಶೇ.70ಕ್ಕೂ ಹೆಚ್ಚು ಸ್ಥಾನ ಬಿಜೆಪಿಗೆ ಬಂದಿವೆ. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶೇ.60ಕ್ಕೂ ಹೆಚ್ಚು ಸ್ಥಾನಗಳು ಬಿಜೆಪಿ ಪಾಲಾಗಲಿವೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಂಪೂರ್ಣ ನೆಲೆ ಕಳೆದುಕೊಂಡಿವೆ ಎಂದು ಟೀಕಿಸಿದರು.
ಜನಪರ ಆಡಳಿತ ನೀಡುವ ಮೂಲಕ ಗಟ್ಟಿಗೊಳ್ಳುತ್ತಿರುವ ಬಿಜೆಪಿ ಬಗ್ಗೆ ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ತನಿಖೆ ಮಾಡಲಿ. ಆದರೆ ಲೋಕಾಯುಕ್ತರ ಮೇಲೆ ಕಾಂಗ್ರೆಸ್‌ಗೆ ವಿಶ್ವಾಸ ಇಲ್ಲ ಎಂದಾದರೆ ಕಾಂಗ್ರೆಸ್ ಏಜೆಂಟ್ ಆಗಿರುವ ಸಿಬಿಐ ಮೇಲೆ ಬಿಜೆಪಿಗೆ ವಿಶ್ವಾಸ ಇಲ್ಲ ಎಂದು ಹೇಳಿದರು.