ರಾಜ್ಯದಲ್ಲಿ ಅದಿರು ರಫ್ತು ನಿಷೇಧಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೊದಲು ಸಲಹೆ ನೀಡಿದ್ದೇ ನಾವು ಎಂದು ಹೇಳಿಕೆ ನೀಡಿದ್ದ ರೆಡ್ಡಿ ಬ್ರದರ್ಸ್ ಇದೀಗ ಉಲ್ಟಾ ಹೊಡೆದಿದ್ದು, ರಾಜ್ಯದಲ್ಲಿ ಏಕಾಏಕಿ ರಫ್ತು ನಿಷೇಧಿಸಿರುವ ಮುಖ್ಯಮಂತ್ರಿಗಳ ಕ್ರಮ ಸರಿಯಲ್ಲ ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸಮರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮುಖಂಡರು ಕೆಸರೆರಚಾಟದಲ್ಲಿಯೇ ತೊಡಗಿದ್ದಾರೆ. ಆದರೆ ಅಕ್ರಮ ಗಣಿಗಾರಿಕೆ ವಿಷಯದಲ್ಲಿ, ರಫ್ತು ನಿಷೇಧಕ್ಕೆ ಸಂಬಂಧಿಸಿದಂತೆ ತಾವು ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬದ್ಧ ಎನ್ನುತ್ತಿದ್ದ ರೆಡ್ಡಿಗಳೇ ಈಗ ತಿರುಗಿ ಬಿದ್ದಿದ್ದಾರೆ.
ದಾವಣಗೆರೆ ಹರಪನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಏಕಾಏಕಿ ರಫ್ತು ನಿಷೇಧಿಸಿರುವ ಮುಖ್ಯಮಂತ್ರಿಗಳ ಕ್ರಮ ಸರಿಯಲ್ಲ. ಸರಕಾರ ಕನಿಷ್ಠ ಮೂರು ತಿಂಗಳಾದರೂ ಕಾಲಾವಕಾಶ ನೀಡಬೇಕಿತ್ತು. ಈಗಾಗಲೇ ಸಾವಿರಾರೂ ಕೋಟಿ ರೂಪಾಯಿಗಳಷ್ಟು ಹಣ ಹೂಡಲಾಗಿದೆ. ಆ ನಿಟ್ಟಿನಲ್ಲಿ ರಫ್ತು ನಿಷೇಧಿಸಿದ್ರೆ ತೊಂದರೆಯಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅದಿರು ವಹಿವಾಟು ನಂಬಿಕೊಂಡು ನೂರಾರು ಕುಟುಂಬಗಳು ಬದುಕುತ್ತಿವೆ. ಸಾವಿರಾರು ಜನ ಉದ್ಯಮ ಅವಲಂಬಿಸಿದ್ದಾರೆ. ಹಾಗಾಗಿ ಅದಿರು ರಫ್ತು ನಿಷೇಧಕ್ಕೆ ಸಂಬಂಧಿಸಿದಂತೆ ಏಕಾಏಕಿ ನಿರ್ಧಾರ ಕೈಗೊಂಡಿರುವ ಬಗ್ಗೆ ಬಹಿರಂಗವಾಗಿಯೇ ಅತೃಪ್ತಿ ವ್ಯಕ್ತಪಡಿಸಿದ್ದಾರೆ.