'ನಾವು ಏನು ತಿನ್ನಬೇಕು, ತಿನ್ನಬಾರದು ಎಂದು ಹೇಳಲು ಅವರು ಯಾರು? ಬಿರಿಯಾನಿ ತಿಂದರೆ ಏನು ತಪ್ಪು, ಅದು ನಮ್ಮ ಆಹಾರ ಪದ್ಧತಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ರಾಜನಾಥ ಸಿಂಗ್ ಟೀಕೆ ವಿರುದ್ಧ ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕಾಂಗ್ರೆಸ್ ನಾಡರಕ್ಷಣಾ ನಡಿಗೆ ಪಾದಯಾತ್ರೆ ಅಂಗವಾಗಿ ಚಳ್ಳಕೆರೆಯ ಪುರಸಭೆ ಮಾಜಿ ಅಧ್ಯಕ್ಷ ವೀರಭದ್ರಬಾಬು ಅವರ ಮನೆಯಲ್ಲಿ ವಾಸ್ತವ್ಯ ಹೂಡದ್ದ ಸಿದ್ದರಾಮಯ್ಯ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಮುಖಂಡರು ಹಗಲು ಪಾದಯಾತ್ರೆ ನಡೆಸಿ, ರಾತ್ರಿ ಚಿಕನ್ ಬಿರಿಯಾನಿ ತಿಂದು ಮಜಾ ಮಾಡುತ್ತಿದ್ದಾರೆ. ಮತ್ತೊಂದೆಡೆ ಕೇಂದ್ರದಲ್ಲಿ ಕಾಂಗ್ರೆಸ್ ದರ ಏರಿಕೆ ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಇತ್ತೀಚೆಗಷ್ಟೇ ನಡೆದ ಬಿಜೆಪಿ ಜನಜಾಗೃತ ಸಭೆಯಲ್ಲಿ ಸಿಂಗ್ ಆರೋಪಿಸಿದ್ದರು.
ಬಿಜೆಪಿ ರಾಷ್ಟ್ರ ಮಟ್ಟದ ನಾಯಕರು ಸಣ್ಣತನದ ಹೇಳಿಕೆ ನೀಡುತ್ತಿದ್ದಾರೆ. ಮನುಷ್ಯನ ಆಹಾರ ಪದ್ಧತಿ ಪ್ರಶ್ನಿಸಲು ಇವರು ಯಾರು ಎಂದು ಕಿಡಿಕಾರಿದ ಅವರು, ಬಿಜೆಪಿಗೆ ಘನತೆಯೇ ಇಲ್ಲ ಎಂದರು.