ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಲು ಸರಕಾರಕ್ಕೆ ಆದೇಶ ನೀಡುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ವಕೀಲ ಬಿ.ವಿ.ಪುಟ್ಟೇಗೌಡ ಅವರು ಸಲ್ಲಿಸಿರುವ ಅರ್ಜಿ ಕುರಿತಂತೆ ಹೈಕೋರ್ಟ್‌ನ ಜನರಲ್ ಹಾಗೂ ಸರಕಾರಕ್ಕೆ ಶುಕ್ರವಾರ ತುರ್ತು ನೋಟಿಸ್ ಜಾರಿಗೆ ನ್ಯಾಯಮೂರ್ತಿಗಳಾದ ಎನ್.ಕೆ.ಪಾಟೀಲ್ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶ ನೀಡಿದೆ.
2003ರ ಮಾರ್ಚ್ 31ರಂದು ಆದೇಶ ಹೊರಡಿಸಿರುವ ಸರಕಾರ, ಕನ್ನಡ ಭಾಷೆ ಕಡ್ಡಾಯಗೊಳಿಸಲು ಸೂಚಿಸಿತ್ತು. ಅಲ್ಲದೇ ಸಿವಿಲ್ ಪ್ರಕ್ರಿಯಾ ಸಂಹಿತೆಯ 137ನೇ ಕಲಂ ಹಾಗೂ ಭಾರತೀಯ ದಂಡ ಸಂಹಿತೆ 272ನೇ ಕಲಂಗಳಲ್ಲಿ ಕೂಡ ಸ್ಥಳೀಯ ಭಾಷೆ ಬಳಕೆ ಕುರಿತು ಉಲ್ಲೇಖವಿದೆ. ಆದರೆ ಈ ಆದೇಶ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಪುಟ್ಟೇಗೌಡ ಅರ್ಜಿಯಲ್ಲಿ ದೂರಿದ್ದರು.
ಆ ನಿಟ್ಟಿನಲ್ಲಿ ಅಧೀನ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರು ಇಂಗ್ಲಿಷ್‌ನಲ್ಲಿಯೇ ಕಲಾಪ ಮುಂದುವರಿಸಿದ್ದಾರೆ. ಕೆಲವು ನ್ಯಾಯಾಧೀಶರಷ್ಟೇ ಕನ್ನಡದಲ್ಲಿ ಕಲಾಪ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.