ಸರಕಾರದ ಬಗ್ಗೆ ಟೀಕಿಸಿದ್ರೆ ಹುಷಾರ್!: ಪೇಜಾವರಶ್ರೀಗೆ ಶಾಸಕ
ಬೆಂಗಳೂರು, ಶನಿವಾರ, 7 ಆಗಸ್ಟ್ 2010( 17:23 IST )
ಸರಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪೇಜಾವರಶ್ರೀ ಅವರ ವಿರುದ್ಧ ಕಿಡಿಕಾರಿರುವ ಬಿಜೆಪಿ ಶಾಸಕ ಎಂ.ಶ್ರೀನಿವಾಸ್, ಸರಕಾರದ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡಬೇಡಿ. ಸರಿ ಇರೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮಠಗಳನ್ನು ಕಾಪಾಡಿಕೊಳ್ಳುವ ಶಕ್ತಿ ನಿಮಗಿಲ್ಲ. ನಿಮಗೂ ಸರಕಾರಕ್ಕೂ ಏನು ಸಂಬಂಧ, ಈ ರೀತಿ ಸರಕಾರದ ವಿರುದ್ಧ ಲಘುವಾಗಿ ಮಾತನಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಲಗ್ಗೆರೆಯಲ್ಲಿ ನಡೆದ 64 ವಾಸದ ಮನೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಮಠಗಳಲ್ಲಿ ಕಿತ್ತಾಟ ನಡೆಯುತ್ತಿದೆ. ಹೀಗಿರುವಾಗ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲು ಏನು ಸಂಬಂಧ ಎಂದು ಪ್ರಶ್ನಿಸಿದರು. ಮಠಾಧೀಶರು ತಮ್ಮ ಕೆಲಸ ಮಾಡಿಕೊಂಡಿದ್ದರೆ ಒಳ್ಳೆಯದು ಅದನ್ನು ಬಿಟ್ಟು ಹೀಗೆಲ್ಲ ಸರಕಾರದ ಬಗ್ಗೆ ಟೀಕಿಸುವುದು ಒಳ್ಳೆಯದಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.