ಆಗೋಸ್ಟ್ 9ರಂದು ಬಳ್ಳಾರಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಪಾದಯಾತ್ರೆ, ಬಹಿರಂಗ ಸಭೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಊಹಾಪೋಹಗಳಿಗೆ ಕಿವಿಗೊಡಬಾರದು, ಶಾಂತಿ-ಸಹನೆಯಿಂದ ಸಹಕರಿಸಬೇಕು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಮನವಿ ಮಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಎಂತಹ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಮುಖಂಡರು ಏನೇ ಟೀಕೆ, ವಿಮರ್ಶೆ ಮಾಡಿ ಪ್ರಚೋದನಾತ್ಮಕ ಹೇಳಿಕೆ ನೀಡಿದರೂ ಕೂಡ ಶಾಂತಿಯುತರಾಗಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಪಕ್ಷದ ಪಾದಯಾತ್ರೆ, ಬಹಿರಂಗ ಸಭೆ ಶಾಂತಿಯುತವಾಗಿ ನಡೆಯುವಂತೆ ಸಹಕರಿಸಬೇಕು. ಬಳ್ಳಾರಿಯು ಶಾಂತಿ-ಸುವ್ಯವಸ್ಥೆಗೆ ಹೆಸರಾಗಿದ್ದು ಈ ಹೆಸರನ್ನು ಉಳಿಸಿಕೊಳ್ಳೋಣ ಎಂದರು.
ಕಳೆದ ಐದಾರು ದಶಕಗಳಿಂದ ಕಾಂಗ್ರೆಸ್ ಪಕ್ಷದವರು ಆಡಳಿತ ನಡೆಸಿದ್ದರೂ ಎಷ್ಟರ ಮಟ್ಟಿಗೆ ಅಭಿವೃದ್ದಿ ಕೈಗೊಂಡಿದ್ದಾರೆ ಎಂಬುದನ್ನು ಜನತೆ ಮನಗಂಡಿದ್ದಾರೆ. ಬಿಜೆಪಿ ಆಡಳಿತದ ಈ ಎರಡು ವರ್ಷಗಳಲ್ಲಿ ಬಳ್ಳಾರಿ ಜಿಲ್ಲೆಯ ಅಭಿವೃದ್ದಿ ಪಥದತ್ತ ದಾಪುಗಾಲು ಹಾಕುತ್ತಿರುವುದನ್ನು ಗುರುತಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಮುಖಂಡರು ಯಾವುದೇ ಯಾತ್ರೆ, ಸಭೆ ನಡೆಸಿದರು ಜನತೆ ಮರುಳಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.