ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರನ್ನು ಜೈಲಿಗೆ ಅಟ್ಟದೆ ಬಿಡುವುದಿಲ್ಲ, ಕಾಂಗ್ರೆಸ್ ಶಾಸಕ ಸಂತೋಷ್ ಲಾಡ್, ರಾಜ್ಯಸಭಾ ಸದಸ್ಯ ಅನಿಲ್ ಲಾಡ್, ಮಾಜಿ ಶಾಸಕ ಹೆಚ್ ಆರ್. ಗವಿಯಪ್ಪ ನಿಮ್ಮ ಕೈಗೆ ಕೋಳ ಬೀಳುವ ದಿನ ದೂರವಿಲ್ಲ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಸಂಡೂರಿನ ಎಪಿಎಂಸಿ ಆವರಣದಲ್ಲಿ ಶನಿವಾರ ನಡೆದ ಜಿಲ್ಲಾ ಬಿಜೆಪಿಯ ಸ್ವಾಭಿಮಾನಿ ಸಮಾವೇಶದಲ್ಲಿ ಆಕ್ರೋಶಿತರಾಗಿ ಮಾತನಾಡಿದ ಅವರು, ಬಿಜೆಪಿಯವರು ಯಾರೂ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ಅಕ್ರಮ ಗಣಿಗಾರಿಕೆ ಮಾಡುತ್ತಿರುವವರು ಕಾಂಗ್ರೆಸ್ ಮುಖಂಡರು ಎಂದು ವಾಗ್ದಾಳಿ ನಡೆಸಿದರು.
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿದ ವರದಿಯಲ್ಲಿ ನಿಮ್ಮ ಜಾತಕ ಬಯಲಾಗಿದೆ, ಕಾದು ನೋಡಿ ಲಾಡ್ ಸಹೋದರರು, ಗವಿಯಪ್ಪ ಅವರು ಜೈಲಿಗೆ ಹೋಗುವುದು ಖಚಿತ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ಸಿಗರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅನಾವಶ್ಯಕವಾಗಿ ನಮ್ಮ ಮೇಲೆ ಗೂಬೆ ಕೂರಿಸಿ, ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಂತೋಷ್ ಲಾಡ್ ಎಂತಹ ವಂಚಕ ಎಂಬುದು ಎಲ್ಲರಿಗೂ ತಿಳಿದಿದೆ. ಅಂತಹವರ ಜೊತೆ ಸಿದ್ದರಾಮಯ್ಯ ಪಾದಯಾತ್ರೆ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ವ್ಯಂಗ್ಯವಾಡಿದರು. ಲೋಕಾಯುಕ್ತರ ವರದಿ ಪೂರ್ಣವಾಗಿ ಹೊರಬೀಳಲಿ ಯಾರು ಕಳ್ಳರು, ಯಾರು ಸತ್ಯವಂತರು ಎಂಬುದು ರಾಜ್ಯದ ಜನತೆಗೆ ತಿಳಿಯಲಿದೆ ಎಂದು ಈ ಸಂದರ್ಭದಲ್ಲಿ ಸವಾಲು ಹಾಕಿದರು.