ಸಂಬಂಧಿಕರೊಬ್ಬರಿಗೆ ಮನೆ ಕೊಡಿಸುತ್ತೇನೆ ಎಂದು ಶಾಸಕ ವಿ.ಸೋಮಣ್ಣ ಅವರ ಗನ್‌ಮ್ಯಾನ್ ಆಗಿದ್ದ ಗಣೇಶ್ ಎಂಬವರು ಸುಮಾರು ಎಂಟು ಲಕ್ಷ ರೂಪಾಯಿಯನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ವೃತ್ತಿಯಲ್ಲಿ ಪೊಲೀಸ್ ಆಗಿರುವ ಗಣೇಶ್ ಶಾಸಕ ಸೋಮಣ್ಣ ಅವರ ಗನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈ ವ್ಯಕ್ತಿ ಲ್ಯಾಂಡ್ ಡೀಲಿಂಗ್ ಪ್ರವೃತ್ತಿ ಇಟ್ಟುಕೊಂಡಿದ್ದು, ಅದರಂತೆ ತನ್ನ ಸಂಬಂಧಿ ರಾಮಕ್ಕ ಎಂಬವರಿಗೆ ಮನೆ ಕೊಡಿಸುತ್ತೇನೆ ಎಂದು ಎಂಟು ಲಕ್ಷ ರೂಪಾಯಿ ಪಡೆದಿದ್ದರು. ಆದರೆ ಹಣ ಪಡೆದು ಮನೆ ಕೊಡಿಸದೆ ವಂಚಿಸಿರುವುದಾಗಿ ರಾಮಕ್ಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ರಾಮಕ್ಕ ಅವರ ಪತಿ ತೀರಿಕೊಂಡ ನಂತರ, ತಾವು ಸಾಕಷ್ಟು ಕಷ್ಟದಲ್ಲಿದ್ದೇವೆ. ಹಾಗಾಗಿ ನಮಗೆ ಮನೆ ಬೇಡ, ಕೊಟ್ಟ ಹಣವನ್ನಾದರೂ ವಾಪಸ್ ಕೊಡಿ ಎಂದು ಗಣೇಶ್‌ಗೆ ಮನವಿ ಮಾಡಿಕೊಂಡಿದ್ದರು. ಅವರ ಯಾವುದೇ ಕೋರಿಕೆಗೂ ಮಣಿಯದ ವಂಚಕ ಗಣೇಶ್ ಹಣ ವಾಪಸ್ ಕೊಡದೆ ಸತಾಯಿಸತೊಡಗಿದ್ದ. ಇದರಿಂದ ನೊಂದ ರಾಮಕ್ಕ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಠಾಣೆಯಲ್ಲಿ ದೂರು ದಾಖಲಾದ ಕೂಡಲೇ ಗಣೇಶ್, ತನ್ನ ವಿರುದ್ಧ ಕೊಟ್ಟ ದೂರು ವಾಪಸ್ ತೆಗೆದುಕೊಂಡರೆ ಮಾತ್ರ ಹಣ ವಾಪಸ್ ಕೊಡುತ್ತೇನೆ ಎಂದು ಧಮಕಿ ಹಾಕಿ, ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿಯೂ ರಾಮಕ್ಕ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಶಾಸಕ ಸೋಮಣ್ಣ ಅವರ ಬಳಿ ಗೋಳು ಹೇಳಿಕೊಂಡರು ಕೂಡ ಯಾವುದೇ ಪರಿಹಾರ ಕಂಡಿಲ್ಲ ಎಂಬ ಅಳಲು ರಾಮಕ್ಕ ಅವರದ್ದು. ಅಂತೂ ರಾಮಕ್ಕನ ಸ್ಥಿತಿ ಕೊಟ್ಟವ ಕೋಡಂಗಿ, ಇಸ್ಕಂಡವ ವೀರಭದ್ರ ಎಂಬ ಗಾದೆ ಮಾತಿನಂತಾಗಿದೆ.