ಮನುಷ್ಯ ಎಂದ ಮೇಲೆ ಮುದುಕರಾಗುತ್ತಾರೆ. ಹಾಗಂತ ಮುದುಕರನ್ನು ಕೆಲಸಕ್ಕೆ ಬಾರದವರು ಅಂತ ಕರೆಯಲಿಕ್ಕೆ ಸಾಧ್ಯವೇ. ನಿಮ್ಮ ಅಪ್ಪ ದೇವೇಗೌಡರಿಗೆ ವಯಸ್ಸಾಗಿದೆ ಹಾಗಂತ ಅವರನ್ನು ಮಾರುತ್ತೀರಾ? ಹೀಗೆಂದು ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸುತ್ತಿರುವ ಕುಮಾರಸ್ವಾಮಿ ಮತ್ತು ಗೌಡರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಈ ರೀತಿಯಾಗಿ ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯಸ್ಸಾದ ದನ, ಎಮ್ಮೆ, ಎತ್ತುಗಳನ್ನು ಮುಖ್ಯಮಂತ್ರಿ ನಿವಾಸ ಮತ್ತು ಆರ್ಎಸ್ಎಸ್ ಕೇಂದ್ರ ಕಚೇರಿ ಕೇಶವಕೃಪಾಕ್ಕೆ ತುಂಬುವ ವಿನೂತನ ಪ್ರತಿಭಟನೆ ಮಾಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿದ ಹೇಳಿಕೆ ವಿರುದ್ಧ ಕಿಡಿಕಾರಿದರು.
ಅಪ್ಪ-ಮಕ್ಕಳು ಅನಾವಶ್ಯಕವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದನಗಳಿಗೆ ವಯಸ್ಸಾಗಿದೆ ಅಂತ ಮಾರಾಟ ಮಾಡುತ್ತಾರಂತೆ. ಹಾಗಾದರೆ ಗೌಡರಿಗೆ ವಯಸ್ಸಾಗಿದೆಯಲ್ಲ ಅವರನ್ನು ಕುಮಾರಸ್ವಾಮಿ ಮಾರುತ್ತಾರಾ? ಎಂದು ಪ್ರಶ್ನಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಹಾಕಿ ಎಂದು ರಾಜ್ಯಪಾಲರ ಬಳಿಗೆ ಕಳುಹಿಸಿದರೆ ಅಂಕಿತ ಹಾಕುವ ಬದಲು ಅದನ್ನು ರಾಷ್ಟ್ರಪತಿಗೆ ಕಳುಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆ ಇಲ್ಲ ಎನ್ನುವಂತೆ ರಾಜ್ಯಪಾಲರು ವರ್ತಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದ 18 ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಯಾವ ರಾಜ್ಯಗಳಲ್ಲೂ ಅಲ್ಲಿನ ರಾಜ್ಯಪಾಲರು ಕಾಯ್ದೆ ಪರಾಮರ್ಶೆಗೆ ರಾಷ್ಟ್ರಪತಿಗೆ ಕಳುಹಿಸಿದ ನಿದರ್ಶನವಿಲ್ಲ ಎಂದರು. ಆದರೆ ಕಾಯ್ದೆಗೆ ಉಭಯ ಸದನಗಳಲ್ಲಿ ಅನುಮೋದನೆ ಪಡೆಯಲಾಗಿದೆ. ಇನ್ನಾದರು ರಾಜ್ಯದ ಜನರ ಭಾವನೆಗೆ ಬೆಲೆ ಕೊಟ್ಟು, ರಾಷ್ಟ್ರಪತಿಗೆ ಕಳುಹಿಸಿರುವ ಕಾಯ್ದೆಯನ್ನು ಹಿಂದಕ್ಕೆ ಪಡೆದು ಅಂಕಿತ ಹಾಕಬೇಕು ಎಂದು ಒತ್ತಾಯಿಸಿದರು.