ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯದಲ್ಲಿ ಮೈನಿಂಗ್ ಲಾಬಿ ಹುಟ್ಟಡಗಿಸುತ್ತೇವೆ: ವೀರಪ್ಪ ಮೊಯ್ಲಿ (Veerappa Moily | Congress | BJP | Yeddyurappa | Bellary | Reddy)
ರಾಜ್ಯದಲ್ಲಿ ಮೈನಿಂಗ್ ಲಾಬಿ ಹುಟ್ಟಡಗಿಸುತ್ತೇವೆ: ವೀರಪ್ಪ ಮೊಯ್ಲಿ
ಬಳ್ಳಾರಿ, ಸೋಮವಾರ, 9 ಆಗಸ್ಟ್ 2010( 15:56 IST )
PTI
'ಮೈನಿಂಗ್ ಲಾಬಿಯ ಹುಟ್ಟಡಗಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಇಂದು ರಾಜ್ಯದಲ್ಲಿ ಮೈನಿಂಗ್ ಲಾಬಿ ರಾಕ್ಷಸ ರೂಪ ತಳೆದಿದೆ. ಆ ನಿಟ್ಟಿನಲ್ಲಿ ಗಣಿ ಲಾಬಿ ಹುಟ್ಟಡಗಿಸಲು ಕೆಲವೇ ದಿನಗಳಲ್ಲಿ ಪ್ರಧಾನಿಯವರಿಂದ ಹೊಸ ಕಾಯ್ದೆ ಜಾರಿಗೆ ಬರಲಿದೆ' ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಸೋಮವಾರ ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಅಂತಿಮ ದಿನದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಿಂದ ಬಳ್ಳಾರಿಯೆಡೆಗೆ ಕಾಂಗ್ರೆಸ್ ಪಕ್ಷದ ಮಾಡಿದ ನಾಡ ರಕ್ಷಣಾ ನಡಿಗೆಯ ಪಾದಯಾತ್ರೆಯಿಂದಾಗಿ ಕೇವಲ ರಾಜ್ಯದ ಜನರ ಕಣ್ಣು ತೆರೆಸಿಲ್ಲ, ಬದಲಿಗೆ ರಾಷ್ಟ್ರದ ಕಣ್ಣನ್ನು ತೆರೆಸಿದೆ ಎಂದರು.
ಎಷ್ಟೇ ಪಾದಯಾತ್ರೆ ನಡೆಸಿ ಬಳಲಿದರೂ ಸಹ ಕಾಂಗ್ರೆಸ್ ಪಕ್ಷದ ಇಚ್ಚಾಶಕ್ತಿ ಕಡಿಮೆಯಾಗುವುದಿಲ್ಲ, ಇದು ಅಂತ್ಯ ಅಲ್ಲ, ಆರಂಭವಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಹೊಸ ಯುಗ ಆರಂಭವಾಗಿದೆ. ಅಷ್ಟೇ ಅಲ್ಲ ಗಣಿ ಲಾಬಿ ಹುಟ್ಟಡಗಿಸಲು ಕೇಂದ್ರದ ಬಳಿ ಅನೇಕ ಬ್ರಹ್ಮಾಸ್ತ್ರಗಳಿವೆ. ಬಂಡವಾಳಶಾಹಿಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸಚಿವರು ಕೇವಲ ವ್ಯಯಕ್ತಿಕ ಲಾಭದ ಆಸೆಯಿಂದ ತಮ್ಮ ವಹಿವಾಟಿನ ಮೇಲೆಯೇ ಹೆಚ್ಚಿನ ಗಮನ ನೆಟ್ಟಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸದ ಈ ಜನಪ್ರತಿನಿಧಿಗಳು ನೈಸರ್ಗಿಕ ಸಂಪತ್ತಿನ ಲೂಟಿಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ರಾಜ್ಯದ ಜನತೆ ಎಚ್ಚೆತ್ತು ಹೋರಾಟ ಮಾಡುವ ಮೂಲಕ ಹೊಸ ಶಕ್ತಿಯನ್ನು ತುಂಬಿದ್ದೀರಿ ಎಂದರು.
ಮೈನಿಂಗ್ ಲಾಬಿಯ ಮೂಲಕವೇ ಸರಕಾರವನ್ನೇ ತಮ್ಮ ಅಂಗೈಯಲ್ಲಿಟ್ಟು ಅಧಿಕಾರ ನಡೆಸಲು ಹೊರಟಿದ್ದಾರೆ. ಇದರಿಂದಾಗಿ ಪ್ರಜಾಪ್ರಭುತ್ವವನ್ನೇ ವಿರೂಪಗೊಳಿಸಲು ಹೊರಟಿದ್ದಾರೆ. ಆದರೆ ಅದಕ್ಕೆ ಕೇಂದ್ರ ಸರಕಾರ ಮಣಿಯುವುದಿಲ್ಲ, ಜನರ ನಿರೀಕ್ಷೆಗೂ ಮೀರಿ ಅದಕ್ಕೆ ತಕ್ಕ ಕಾನೂನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯ, ದೇಶದಲ್ಲಿನ ಮೈನಿಂಗ್ ಲಾಬಿಯ ನಿರ್ನಾಮ ಮಾಡುವುದೇ ನಮ್ಮ ಸರಕಾರದ ಪಣವಾಗಿದೆ. ಅದಕ್ಕೆ ಕೆಲವೇ ದಿನಗಳಲ್ಲಿ ಪ್ರಧಾನಿಯವರಿಂದ ಹೊಸ ಕಾಯ್ದೆ ಜಾರಿಗೆ ಬರಲಿದೆ ಎಂದರು.