ಗೋಹತ್ಯೆ ಪ್ರೋತ್ಸಾಹಕರಿಗೆ ಮಠ ಮಾನ್ಯಗಳ ಪ್ರವೇಶ ಬೇಡ: ಆಯನೂರು
ಶಿವಮೊಗ್ಗ, ಸೋಮವಾರ, 9 ಆಗಸ್ಟ್ 2010( 19:03 IST )
ಗೋ ಹತ್ಯೆಗೆ ಪ್ರೋತ್ಸಾಹ ನೀಡುವಂತಹ ವ್ಯಕ್ತಿಗಳಿಗೆ ಬುದ್ದಿ ಕಲಿಸುವ ನಿಟ್ಟಿನಲ್ಲಿ ನಾಡಿನ ವಿವಿಧ ಮಠಾಧೀಶರು ತಮ್ಮ ಮಠ, ಮಂದಿರಗಳ ಮುಂದೆ ಗೋ ಹತ್ಯೆ ಪ್ರೋತ್ಸಾಹಿಸುವವರಿಗೆ ಪ್ರವೇಶವಿಲ್ಲ ಎಂದು ನಾಮಫಲಕ ಬರೆದು ತೂಗು ಹಾಕಬೇಕು ಎಂದು ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್ ಸಲಹೆ ನೀಡಿದ್ದಾರೆ.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಹುಸಂಖ್ಯಾತ ಜನರ ಭಾವನೆಗೆ ಧಕ್ಕೆ ತರುವಂತಹ ಗೋ ಹತ್ಯೆಯನ್ನು ನಿಷೇಧಿಸಿ ರಾಜ್ಯ ಸರಕಾರ ಮಸೂದೆ ಅಂಗೀಕರಿಸಿದೆ. ಆದರೆ ಇದಕ್ಕೆ ಕೆಲವೇ ವ್ಯಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಮಠಾಧೀಶರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು. ಗೋ ಹತ್ಯೆಗೆ ಬೆಂಬಲ ನೀಡುವಂತಹವರಿಗೆ ತಮ್ಮ ಮಠ, ಮಂದಿರದಲ್ಲಿ ಪ್ರವೇಶ ನಿರಾಕರಿಸಬೇಕು ಎಂದರು.
ಗೋ ಹತ್ಯೆ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಆಯನೂರು, ಅವರಲ್ಲಿ ಔರಂಗಜೇಬನ ರಕ್ತ ಹರಿಯುತ್ತಿರುವ ಕಾರಣ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಕಾರಣ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದ್ದಾರೆ. ಇದೇ ವೇಳೆ ಬಹುಸಂಖ್ಯಾತರ ಭಾವನೆಗಳಿಗೆ ನೋವುಂಟಾಗುತ್ತದೆ ಎಂಬುದನ್ನು ಮರೆತಿದ್ದಾರೆ ಎಂದು ಹೇಳಿದರು.
ಗೋ ಹತ್ಯೆ ನಿಷೇಧವನ್ನು ವಿರೋಧಿಸುವ ದೇವೇಗೌಡರು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಮೂರ್ತಿ ಆರ್.ಸಿ.ಲಹೋಟಿ ನೇತೃತ್ವದ ಪೂರ್ಣಪೀಠ ನೀಡಿರುವ ತೀರ್ಪು ಓದಬೇಕು. ಗುಜರಾತ್ ರಾಜ್ಯ ಸರಕಾರ ಮತ್ತು ಅಖಿಲ ಭಾರತ ಕೃಷಿ ಗೋ ಸೇವಾ ಸಂಘ, ಜೀವ ದಯಾ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿ ನೀಡಿರುವ ತೀರ್ಪಿನಲ್ಲಿ ಗೋ ಹತ್ಯೆ ನಿಷೇಧವನ್ನು ಎತ್ತಿ ಹಿಡಿದಿದೆ ಎಂದರು.