ಇತ್ತ ಬಳ್ಳಾರಿನಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಮ್ಮೇಳನ ನಡೆಯುತ್ತಿರುವಂತೆಯೇ ಅತ್ತ ನವದೆಹಲಿಯಲ್ಲಿ ರಾಜ್ಯದ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ನಿಯೋಗವು ಸೋಮವಾರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ವಿವಾದತ್ಮಾಕ 'ಗೋ ಹತ್ಯೆ ನಿಷೇಧ ಮಸೂದೆ'ಗೆ ಒಪ್ಪಿಗೆ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿತು.
ರಾಜ್ಯ ವಿಧಾನಮಂಡಲ ಅಂಗೀರಿಕರಿಸಿರುವ 'ಗೋ ಹತ್ಯೆ ನಿಷೇಧ ಮಸೂದೆ'ಗೆ ರಾಷ್ಟ್ರಪತಿ ಅನುಮೋದನೆ ನೀಡಬೇಕು ಎಂದು ಮನವಿಯಲ್ಲಿ ಬೇಡಿಕೆ ಇರಿಸಲಾಯಿತು.
ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಈ ಹಿಂದೆಯೇ ಮಸೂದೆಗೆ ಅಂಗೀಕಾರ ದೊರೆತಿದೆ. ಹಾಗೆಯೇ ರಾಜ್ಯದ ಗೋ ಸಂರಕ್ಷಣೆಗೆ ರಾಷ್ಟ್ರಪತಿ ಅವಕಾಶ ಮಾಡಿಕೊಡಲಿದ್ದಾರೆ ಎಂದು ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಗೋ ಹತ್ಯೆ ನಿಷೇಧ ಮಸೂದೆ 1964ರಲ್ಲಿ ಜಾರಿಗೆ ಬಂದಿದ್ದ ಕರ್ನಾಟಕ ಗೋ ಹತ್ಯೆ ತಡೆ ಹಾಗೂ ರಾಸುಗಳ ಸಂರಕ್ಷಣಾ ಕಾಯ್ದೆಗೆ ಪರ್ಯಾಯವಾಗಲಿದೆ. ಹೊಸದಾಗಿ ಅಂಗೀಕರಿಸಿರುವ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ ದೊರೆಯುವ ವಿಶ್ವಾಸವಿದೆ ಎಂದವರು ಹೇಳಿದರು.