ರಾಜ್ಯದ ಹತ್ತು ಬಂದರುಗಳ ಮೂಲಕ ಅದಿರು ರಫ್ತನ್ನು ನಿಷೇಧಿಸಿ ಹಾಗೂ ಅದಿರು ಸಾಗಾಣಿಕೆ ಪರವಾನಿಗೆ ನೀಡಿಕೆಗೆ ನಿಷೇಧ ಹೇರಿ ಸರಕಾರ ಹೊರಡಿಸಿರುವ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಈ ಪ್ರಕರಣದ ಅಂತಿಮ ವಿಚಾರಣೆಯನ್ನು ಆ.20ಕ್ಕೆ ನಿಗದಿ ಮಾಡಿರುವ ಮುಖ್ಯನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಅವರನ್ನು ಒಳಗೊಂಡ ವಿಭಾಗೀಯ ಪೀಠ, ಯಾವುದೇ ಕಾರಣಕ್ಕೂ ಹೆಚ್ಚಿನ ಅವಧಿಯನ್ನು ಪಡೆದುಕೊಳ್ಳದಂತೆ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಅದಿರು ರಫ್ತು ನಿಷೇಧದ ಆದೇಶ ಹೊರಡಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಸೀಸಗೋವಾ ಮೈನಿಂಗ್ ಕಂಪೆನಿ, ವಿ.ಎಸ್.ಲಾಡ್ ಅಂಡ್ ಸನ್ಸ್, ಭಾರತ್ ಮೈನ್ಸ್ ಸೇರಿದಂತೆ ಹಲವಾರು ಅದಿರು ಕಂಪೆನಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.
ತದಡಿ, ಹೊನ್ನಾವರ, ಭಟ್ಕಳ, ಹಂಗಾರಕಟ್ಟೆ, ಕುಂದಾಪುರ, ಮಲ್ಪೆ, ಹಳೆ ಮಂಗಳೂರು, ಬೇಲೆಕೇರಿ, ಕಾರವಾರ ಮತ್ತು ಪಡುಬಿದ್ರಿ ಬಂದರುಗಳಿಂದ ಅದಿರು ರಫ್ತು ನಿಷೇಧಕ್ಕೆ ಕೆಲವು ಕಂಪನಿಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಅದಿರು ರಫ್ತು ನಿಷೇಧ ಪ್ರಕರಣದ ವಿಚಾರಣೆ ಸೋಮವಾರ ಪೀಠದ ಮುಂದೆ ಬಂದಾಗ, ಅರ್ಜಿದಾರರೊಬ್ಬರು ಚೆಲ್ಲೂರು ಅವರ ಸಂಬಂಧಿಯಾದ ಕಾರಣ, ಈ ಪ್ರಕರಣದ ವಿಚಾರಣೆಯಿಂದ ಅವರು ಹಿಂದಕ್ಕೆ ಸರಿದರು. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಇನ್ನೊಬ್ಬರು ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.