ರಾಜ್ಯದ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಹೆಚ್ಚಿನ ಆಟೋ ಚಾಲಕರ ದುರ್ವರ್ತನೆ, ಸುಲಿಗೆ ಮುಂತಾದವುಗಳ ಬಗ್ಗೆ ಸಾಕಷ್ಟು ಆಗೀಗ್ಗೆ ಕೇಳುತ್ತಿರುತ್ತೇವೆ. ಜನರ ಓಡಾಟಕ್ಕೆ ಲೋಕಲ್ ರೈಲುಗಳಿಲ್ಲದಿರುವ ಮಹಾನಗರಗಳಲ್ಲಿ ಆಟೋ ರಿಕ್ಷಾಗಳು ಅನಿವಾರ್ಯ ಎಂಬ ಹಂತಕ್ಕೆ ತಲುಪಿರುವುದರಿಂದಾಗಿ ಈ ಪರಿಸ್ಥಿತಿ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಈ ಸುಲಿಗೆಕೋರ ಆಟೋಗಳ ವಿರುದ್ಧದ 'ಆಟೋ ಬಹಿಷ್ಕಾರ' ಆಂದೋಲನವೊಂದು ಆನ್‌ಲೈನ್ ಜಗತ್ತಿನಲ್ಲಿ ನಲಿದಾಡುತ್ತಿದೆ.
ಮುಂಬೈಯ ಆಟೋ ಚಾಲಕರು ಹಾಗೂ ದೆಹಲಿಯ ಆಟೋ ಚಾಲಕರ ವಿರುದ್ಧ ಆರಂಭವಾಗಿರುವ ಈ ಆಂದೋಲನವು ಬೆಂಗಳೂರಿಗೆ ಕೂಡ ತಲುಪಿದೆ ಎಂದರೆ ಪ್ರಯಾಣಿಕರು ಎಷ್ಟರ ಮಟ್ಟಿಗೆ ಈ ಆಟೋವಾಲಗಳಿಂದ ರೋಸಿ ಹೋಗಿರಬಹುದು? ನೀವೇ ಯೋಚಿಸಿ.
ಈ ಆಟೋ ಬಹಿಷ್ಕಾರದ ಮುಖ್ಯ ಉದ್ದೇಶ ಕರೆದಲ್ಲಿಗೆ 'ಬರುವುದಿಲ್ಲ' ಎಂದು ಉದ್ಧಟತನ ತೋರುವ ಆಟೋಗಳ ವಿರುದ್ಧ. ಈ ಆಂದೋಲನದ ಹೆಸರು ಮೀಟರ್ ಜಾಮ್. ಬರಲು ನಿರಾಕರಿಸುವ ಮತ್ತು ಬಾಯಿಗೆ ಬಂದಂತೆ ದರ ಹೇಳುವ ರಿಕ್ಷಾ ಚಾಲಕರ ವಿರುದ್ಧ ನಡೆಯುತ್ತಿರುವ ಈ ಆಂದೋಲನಕ್ಕಾಗಿಯೇ ಮೀಟರ್‌ಜಾಮ್ ಡಾಟ್ ಕಾಂ ಎಂಬ ಸೈಟನ್ನೂ ತೆರೆಯಲಾಗಿದೆ.
ಈ ಸೈಟಿಗೆ ಹೋಗಿ ನೋಡಿದರೆ, ಆಗಸ್ಟ್ 12ರಂದು ಮೀಟರ್ ಜಾಮ್ ಆಂದೋಲನ ನಡೆಯಲಿದ್ದು, ಈ ರೀತಿಯಾಗಿ 'ಬರಲೊಲ್ಲೆ' ಎಂದು ಹೇಳುವ ಆಟೋಗಳು ಮತ್ತು ಟ್ಯಾಕ್ಸಿಗಳಿಗೇ 'ನೋ' ಹೇಳಬೇಕು ಎಂದು ಪಣ ತೊಟ್ಟ ಹದಿಮೂರುವರೆ ಸಾವಿರ ಮಂದಿ ಮೀಟರ್ ಜಾಮ್‌ನ ಫೇಸ್‌ಬುಕ್ ಪುಟದಲ್ಲಿದ್ದಾರೆ. ಅಂತೆಯ ಟ್ವಿಟರ್‌ನಲ್ಲಿಯೂ ಇದು ಸುಳಿದಾಡುತ್ತಿದೆ.
ಈ ಅಂತರಜಾಲ ತಾಣವು ಐದಾರು ದಿನಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದೆ. ಫೇಸ್‌ಬುಕ್ ನೋಡಿದರೆ, ಅಲ್ಲಿ ರೋಷಾವೇಷಗೊಂಡಿರುವ ಆಟೋ ಪ್ರಯಾಣಿಕರು, ಈ ಆಂದೋಲನದ ಕುರಿತು ರಸ್ತೆಗಳಲ್ಲಿಯೂ ಪ್ರಚಾರ ಮಾಡಿ, ಆಟೋ ಚಾಲಕರಿಗೆ ಬಿಸಿ ಮುಟ್ಟಿಸಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.