ಅಕ್ರಮ ಗಣಿಗಾರಿಕೆ, ಅದಿರು ಸಾಗಣೆ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಪ್ರಭಾವಿ ಸಚಿವ ಜಿ.ಜನಾರ್ದನ ರೆಡ್ಡಿ, ಮುಖ್ಯಮಂತ್ರಿಯ ಮನವೊಲಿಸಲಿ, ಯಾರು ಜೈಲಿಗೆ ಹೋಗುತ್ತಾರೋ ನೋಡಿಯೇ ಬಿಡೋಣ ಎಂದು ಗಣಿ ಉದ್ಯಮಿ ಮತ್ತು ಶಾಸಕ ಸಂತೋಷ ಲಾಡ್ ಸವಾಲು ಹಾಕಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಸಚಿವ ಜನಾರ್ದನರೆಡ್ಡಿ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ ಅವರು, ಲೋಕಾಯುಕ್ತ ತನಿಖೆ ವರದಿ ಬರಲಿ, ಕೈ ಕೋಳ ತೊಡಿಸಿ ಮೆರವಣಿಗೆ ಮಾಡುವೆ ಎಂದು ಸಚಿವ ಜನಾರ್ದನರೆಡ್ಡಿ ಹೇಳಿದ್ದು, ಅಷ್ಟೊಂದು ಗಟ್ಟಿತನ, ಪ್ರಾಮಾಣಿಕತೆ ಇರುವುದಾದರೆ ಸಿಬಿಐ ತನಿಖೆ ನಡೆಸಲಿ. ಜೈಲಿಗೆ ಹೋಗಲು ನಾವು ಸಿದ್ಧ ಎಂದು ಅಬ್ಬರಿಸಿದರು.
ಅನಿಲ್ ಲಾಡ್ ಗುಡುಗು: ಗಣಿ ಉದ್ಯಮಿ, ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಮಾತನಾಡಿ, ರೆಡ್ಡಿಗಳಿಗೆ ಧೈರ್ಯ ಇದ್ದರೆ ಜಿಲ್ಲೆಯ 9 ವಿಧಾನ ಸಭೆ ಕ್ಷೇತ್ರಗಳ ಶಾಸಕರ ರಾಜೀನಾಮೆ ಕೊಡಿಸಿ, ಮತ್ತೊಮ್ಮೆ ಜನಾದೇಶ ಪಡೆಯಲಿ. ಯಾರು ಗೆಲ್ಲುತ್ತಾರೋ ನೋಡಿಯೇ ಬಿಡೋಣ ಎಂದು ಸವಾಲು ಹಾಕಿದರು.
5 ವರ್ಷ ಜನಪ್ರತಿನಿಧಿಯಾಗಿ ಇರಿ ಎಂದು ಜನತೆ ಆರಿಸಿ ಕಳಿಸಿದ್ದಾರೆ. ಆದರೆ ಜನರ ಈ ವಿಶ್ವಾಸವನ್ನು ಉಳಿಸಿಕೊಳ್ಳಲು ಆಗದ ಸಚಿವ ಜನಾರ್ದನರೆಡ್ಡಿ ರಾಜೀನಾಮೆ, ಮರು ಚುನಾವಣೆ ಮಾತು ಹೇಳುತ್ತಿದ್ದಾರೆ. ಇದು ಜನತೆಗೆ ಬಗೆಯುವ ದ್ರೋಹ. ಜನತೆ ರೆಡ್ಡಿಗಳಿಗೆ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದರು.
ಪ್ರಕಾಶ್ ಗರಂ: ಅಧಿಕಾರ ಮತ್ತು ಹಣ ಅಪಾತ್ರರಿಗೆ ಸೇರಿದರೆ ಹೇಗೆ ದುರುಪಯೋಗವಾಗುತ್ತದೆ ಎಂಬುದಕ್ಕೆ ರೆಡ್ಡಿ ಸಹೋದರರೇ ಸಾಕ್ಷಿಯಾಗಿದ್ದು, ವ್ಯವಸ್ಥೆಯ ವಿರುದ್ಧ ಕಾಂಗ್ರೆಸ್ ಸಮಾವೇಶ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಹೇಳಿದರು. ರೆಡ್ಡಿಗಳ ಬಗ್ಗೆ ಎರಡು ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಂಬಿಕೆಗೆ ಅನರ್ಹರು. ನಂಬಿಕೆಗೆ ಅನರ್ಹರಾದ ಜನ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತಿದ್ದು, ಜನತೆ ಇವರಿಗೆ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದರು.