ಅದಿರು ರಫ್ತು ನಿಷೇಧ ಮಾಡಿರುವ ಮುಖ್ಯಮಂತ್ರಿಯವರ ಕುರ್ಚಿ ಅಲುಗಾಡಿಸಲು ಕಾಂಗ್ರೆಸ್ ಗಣಿ ಉದ್ಯಮಿಗಳು ತಯಾರಾಗಿದ್ದಾರೆ ಎಂದು ಆರೋಪಿಸಿರುವ ರಾಜ್ಯ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ, ತಾಕತ್ತಿದ್ದರೆ ಈ ಕೆಲ್ಸ ಮಾಡಲಿ ಎಂದು ಸವಾಲು ಹಾಕಿದರು.
ಅವರ ಅಧಿಕೃತ ನಿವಾಸ ಕುಟೀರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಸಮಾವೇಶ ಯಾಕೆ ಮಾಡಿದರು. ಅಕ್ರಮ ಗಣಿಗಾರಿಕೆ ತಡೆಯುವುದಕ್ಕಾಗಿ ಅಲ್ಲವೇ? ಅದೇ ಸಂತೋಷ ಲಾಡ್ ಅದಿರು ರಫ್ತು ನಿಷೇಧ ಮಾಡಿರುವ ಸಿಎಂ ಕುರ್ಚಿಯನ್ನು ಉರುಳಿಸುವುದಾಗಿ ವೇದಿಕೆಯಲ್ಲಿ ಹೇಳಿದರು. ಆಗ ಸಿದ್ದರಾಮಯ್ಯನವರು ಲಾಡ್ ವಿರುದ್ಧ ಗುಡುಗಬೇಕಿತ್ತು. ಲಾಡ್ ಹೇಳಿಕೆಯಿಂದ ಕಾಂಗ್ರೆಸ್ ನಿಜಬಣ್ಣ ಬಯಲಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್‌ನ 29 ಗಣಿ ಉದ್ಯಮಿಗಳಿದ್ದಾರೆ. ಈ ರಾಕ್ಷಸರ ವಿರುದ್ಧ ನಮ್ಮ ಕುಟುಂಬ ಪ್ರಾಮಾಣಿಕ ಹೋರಾಟ ಮಾಡುತ್ತಿದೆ. ಕಾಂಗ್ರೆಸ್ಸಿಗರು ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಹಣದಲ್ಲಿ ಪಾದಯಾತ್ರೆ ಮಾಡಿದ್ದಾರೆ. ಜತೆಗೆ ಸಮಾವೇಶ ಮಾಡಿದ್ದಾರೆ. ವೇದಿಕೆಯಲ್ಲಿ ಲಾಡ್ ಸಹೋದರರು ಅಹಂಕಾರದಿಂದ ಮಾತನಾಡಿದ್ದಾರೆ. ಕಾಂಗ್ರೆಸ್ನ ನಾಯಕರು ನಾಡಿನ ಸಂಪತ್ತು ಉಳಿಸುವುದಾಗಿ ಹೇಳುತ್ತಾರೆ. ಆದರೆ, ಅದೇ ಸಂತೋಷ ಲಾಡ್ ರಫ್ತು ನಿಷೇಧವನ್ನು ವಿರೋಧಿಸಿದ್ದಾರೆ. ಕಾಂಗ್ರೆಸ್ಸಿಗರಿಗೆ ಮಾನ-ಮರ್ಯಾದೆ ಇದೆಯಾ?. ಅಕ್ರಮ ಗಣಿಗಾರಿಕೆ ಹೆಸರಿನಲ್ಲಿ ಪಾದಯಾತ್ರೆ ನಡೆಸಿ, ಅದಿರು ರಫ್ತು ನಿಷೇಧವನ್ನು ವಿರೋಧಿಸುತ್ತಿರುವ ಇವರದು ಯಾವ ಕಾಳಜಿ ಎಂದು ಪ್ರಶ್ನಿಸಿದರು.
ಅದಿರು ರಫ್ತು ನಿಷೇಧಕ್ಕೆ ಜಿಲ್ಲಾ ಮಂತ್ರಿಯಾಗಿ ನನ್ನ ಸಂಪೂರ್ಣ ಬೆಂಬಲವಿದೆ. ಯಡಿಯೂರಪ್ಪ ಮಾಡಿದ ಕಾರ್ಯವನ್ನು ತಾಕತ್ತಿದ್ದರೆ ಪ್ರಧಾನಮಂತ್ರಿ ಮಾಡಿ ತೋರಿಸಲಿ. ಇದರೊಂದಿಗೆ ಅಕ್ರಮ ಗಣಿಗಾರಿಕೆ ಬಗ್ಗೆ ಕಾಂಗ್ರೆಸ್ ಪ್ರಾಮಾಣಿಕ ಕಳಕಳಿ ತೋರಿಸಲಿ ಎಂದರು.
ಮಾಜಿ ಸಿಎಂ ಧರ್ಮಸಿಂಗ್ ಅಕ್ರಮ ಗಣಿಗಾರಿಕೆಯಿಂದ 22 ಕೋಟಿ 22 ಲಕ್ಷ ರೂ. ಸರಕಾರಕ್ಕೆ ನಷ್ಟ ಮಾಡಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲೇ ಹೇಳಿದ್ದಾರೆ. ಆದರೂ ಅಕ್ರಮ ಗಣಿಗಾರಿಕೆ ಕುರಿತು ಮಾತನಾಡಲು ಇಲ್ಲಿಗೆ ಬಂದಿದ್ದಾರೆ. ವಿ.ಎಸ್.ಲಾಡ್ ಕಂಪನಿ, ಎಚ್ಆರ್‌ಜಿ ಕಂಪನಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿವೆ ಎಂದು ಈಗಾಗಲೇ ಹೇಳಿರುವೆ. 59 ಕಂಪನಿಗಳ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿರುವೆ. ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಕಾಂಗ್ರೆಸ್ಸಿಗರ ವಿರುದ್ಧ ಕ್ರಮ ಜರುಗಿಸಿರುವೆ. ಆದರೂ ನ್ಯಾಯಾಲಯದ ಮೊರೆ ಹೋಗಿ ಬಚಾವ್ ಆಗಿದ್ದಾರೆ. ನ್ಯಾಯಾಲಯದ ಬಗ್ಗೆ ನಮಗೆ ಗೌರವವಿದೆ. ಸುಪ್ರೀಂಕೋರ್ಟ್ ನಾವು ಒಂದಿಂಚೂ ಗಡಿ ಒತ್ತುವರಿ ಮಾಡಿಕೊಂಡಿಲ್ಲ ಎಂದು ತೀರ್ಪು ನೀಡಿದೆ ಎಂದು ಸಮರ್ಥಿಸಿಕೊಂಡರು.
ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಆರೋಗ್ಯ ಸರಿಯಿಲ್ಲ ಎಂದುಕೊಂಡಿದ್ದೆ. ಆದರೆ ಅವರ ತಲೆಯೂ ಸರಿಯಿಲ್ಲ. ನಮ್ಮ ತಾಯಿ ಸುಷ್ಮಾ ಸ್ವರಾಜ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಸ್ಮಶಾನಕ್ಕೆ ಹೋಗಲು ಸಿದ್ಧರಾಗಿರುವ ಪ್ರಕಾಶ್ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡಿದ್ದಾರೆ. ಅವರ ಮಗ ಗಣಿ ಉದ್ಯಮಿಯೊಬ್ಬರ 14 ಕೋಟಿ ರೂ. ಬೆಲೆ ಬಾಳುವ ಮಷಿನ್ ಅನ್ನು ಸುಟ್ಟಿದ್ದರೂ ಎಫ್ಐಆರ್ ದಾಖಲಿಸಿಕೊಂಡಿರಲಿಲ್ಲ ಎಂಬುದು ಜಿಲ್ಲೆಯ ಜನರಿಗೆ ಗೊತ್ತಿಲ್ಲವೇ ಎಂದರು.