ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇದ್ದಾಗ 150 ಕೋಟಿ ರೂಪಾಯಿ ಗಣಿ ಲಂಚ ಪಡೆದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂಬ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ಹೈಕೋರ್ಟ್‌ಗೆ ಹೋಗುವಂತೆ ಸೂಚಿಸಿದ್ದು. ಈ ಹಿನ್ನೆಲೆಯಲ್ಲಿ ರೆಡ್ಡಿ ತಮ್ಮ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ಕುಮಾರಸ್ವಾಮಿ ಅವರು ಗಣಿ ಮಾಲೀಕರಿಂದ 150 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಮಾಡಿ ಜನಾರ್ದನ ರೆಡ್ಡಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ರೆಡ್ಡಿಗೆ ನೀವು ಮಾಡಿರುವ ಆರೋಪದ ಬಗ್ಗೆ ಹೈಕೋರ್ಟ್ ಮೆಟ್ಟಿಲೇರುವಂತೆ ಸೂಚನೆ ನೀಡಿದೆ. ಇದೀಗ ದೂರು ವಾಪಸ್ ಪಡೆದಿರುವ ರೆಡ್ಡಿ ಹೈಕೋರ್ಟ್‌ಗೆ ಹೋಗುವುದಾಗಿ ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣಿ ಗುತ್ತಿಗೆ ನೀಡಲು ಗಣಿ ಮಾಲೀಕರಿಂದ 150 ಕೋಟಿ ರೂ.ಲಂಚ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದರು. ಅಲ್ಲದೆ, ಈ ಸಂಬಂಧ ಸಿಡಿ ಹಾಗೂ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಆ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರ ಗಣಿ ಲಂಚ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸುಪ್ರೀಂಕೋರ್ಟ್‌ನಲ್ಲಿ ರೆಡ್ಡಿ ಅರ್ಜಿ ಸಲ್ಲಿಸಿದ್ದರು.