ಹಿರಿಯ ರಾಜಕಾರಣಿ ಎಂ.ಪಿ.ಪ್ರಕಾಶ್ ವಿರುದ್ಧ ಜನಾರ್ದನ ರೆಡ್ಡಿ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿರುವುದನ್ನು ಖಂಡಿಸಿ ಬುಧವಾರ ನಗರದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು ಮತ್ತು ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಿತು.
ಬಳ್ಳಾರಿಯಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಬೃಹತ್ ಸಮಾವೇಶ ನಡೆದ ನಂತರ ಜನಾರ್ದನ ರೆಡ್ಡಿ ಮತ್ತು ಶ್ರೀರಾಮಲು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಎಂ.ಪಿ.ಪ್ರಕಾಶ್ ಅವರ ಆರೋಗ್ಯ ಸ್ಥಿತಿ ಮಾತ್ರ ಸರಿಯಿಲ್ಲ ಎಂದುಕೊಂಡಿದ್ದೆ, ಆದರೆ ಅವರು ಮಾನಸಿಕವಾಗಿಯೂ ಅಸ್ವಸ್ಥರಾಗಿದ್ದಾರೆ ಎಂದು ಈಗ ತಿಳಿಯಿತು. ನಮ್ಮ ತಾಯಿ ಸುಷ್ಮಾ ಸ್ವರಾಜ್ ಬಗ್ಗೆಯೇ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಇದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವ ವಿಚಾರವಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಇದೀಗ ರೆಡ್ಡಿ ಹೇಳಿಕೆ ವಿರುದ್ಧ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದೆ. ಇಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಪ್ರತಿಭಟನೆ ನಡೆಯಿತು. ಹಿರಿಯ, ಸಜ್ಜನ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರ ಅನಾರೋಗ್ಯವನ್ನೇ ಟೀಕಿಸಿ ವಾಗ್ದಾಳಿ ನಡೆಸುವುದು ಸಚಿವ ಸ್ಥಾನದಲ್ಲಿ ಇರುವವರಿಗೆ ಶೋಭೆ ತರುವ ವಿಚಾರವಲ್ಲ. ಅಪಮಾನ ಮಾಡುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಅವರು ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
NRB
ಸಾಹಿತಿ ಚಂದ್ರಶೇಖರ ಪಾಟೀಲ್ ಮಾತನಾಡಿ, ಎಂ.ಪಿ.ಪ್ರಕಾಶ್ ವಿರುದ್ಧ ರೆಡ್ಡಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ರೆಡ್ಡಿಗಳಿಗೆ ರಾಜಕೀಯ ಗೊತ್ತಿಲ್ಲ. ಹಾಗಾಗಿ ಹಿರಿಯರು ಎಂಬುದನ್ನು ಮರೆತು ಏಕವಚನದಲ್ಲಿ ಮಾತನಾಡುವ ಅಹಂ ಬೆಳೆಸಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.
ಹೂವಿನಹಡಗಲಿಯಲ್ಲಿ ಪ್ರತಿಭಟನೆ: ಹಿರಿಯ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರ ವಿರುದ್ಧ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಇಂದು ಹೂವಿನಹಡಗಲಿಯ ಮೈಲಾರಲಿಂಗೇಶ್ವರ ದೇವಾಲಯದಿಂದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದವರೆಗೆ ರಾಲಿ ನಡೆಸಿ ರೆಡ್ಡಿ ವಿರುದ್ಧ ಘೋಷಣೆ ಕೂಗಿದರು.
ರೆಡ್ಡಿ ವಿರುದ್ಧ ಘೋಷಣೆ ಕೂಗಿದ ಸುಮಾರು 150 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಪ್ರಕಾಶ್ ಅವರ ವಿರುದ್ಧ ಕೀಳು ಮಟ್ಟದ ಮಾತನಾಡಿದ ರೆಡ್ಡಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಬೆಂಗಳೂರು ನಗರದಲ್ಲಿ ಮತ್ತೊಂದೆಡೆ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು. ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರಿಗೆ ಅಪಮಾನ ಮಾಡಿದ ರೆಡ್ಡಿಗೆ ಧಿಕ್ಕಾರ ಎಂಬ ಘೋಷಣಾ ಫಲಕ ಹಿಡಿದು ಗಾಂಧಿವೃತ್ತದ ಬಳಿ ಪ್ರತಿಭಟನೆ ನಡೆಸಿದರು.