ಮಾಜಿ ಸಚಿವ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರ್ಯ ಈಡಿಗ ಸಂಘದ ಕಾರ್ಯಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಅವರಿಂದ ಸಿಐಡಿ ಪೊಲೀಸರು ಮಂಗಳವಾರ ಮಾಹಿತಿ ಪಡೆದಿದ್ದಾರೆ.
ಪೊಲೀಸರ ಸೂಚನೆಯಂತೆ ಬೆಂಗಳೂರು ಸಿಐಡಿ ಕಚೇರಿಗೆ ತೆರಳಿದ ಶ್ರೀಧರ್, ಡಿವೈಎಸ್ಪಿ ರೇಣುಕಾ ಸುಕುಮಾರನ್ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ. ಹಾಲಪ್ಪ ವಿರುದ್ಧ ದೂರು ನೀಡಿರುವ ವೆಂಕಟೇಶ್ ಮೂರ್ತಿ ಹಾಗೂ ಶ್ರೀಧರ್ ನಡುವೆ ನಡೆದ ದೂರವಾಣಿ ಸಂಭಾಷಣೆ ಕುರಿತಂತೆ ಪೋಲಿಸರು ಮಾಹಿತಿ ಪಡೆದಿದ್ದಾರೆ.
ತಾವು ಈಡಿಗ ಸಂಘದ ಅಧ್ಯಕ್ಷರಾಗಿದ್ದು, ಸಂಘಟನಾ ಕಾರ್ಯದರ್ಶಿಯಾಗಿದ್ದ ವೆಂಕಟೇಶ್ ಮೂರ್ತಿ ಬಳಿ ಹಲವು ಬಾರಿ ಸಮಾಜದ ಬಗ್ಗೆ ಚರ್ಚೆ ಮಾಡಿದ್ದೇನೆ. ಆದರೆ ಹಾಲಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ ಮಾಡಿಲ್ಲ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದೆ. ಈ ಸಂಪರ್ಕ ಕಡಿದು 12 ವರ್ಷಗಳಾಗಿವೆ. 2004ರಿಂದ ಬಂಗಾರಪ್ಪರೊಂದಿಗಿದ್ದ ರಾಜಕೀಯ ಸಂಬಂಧವೂ ಇಲ್ಲವಾಗಿದೆ ಎಂದು ಶ್ರೀಧರ್ ಮೌಖಿಕ ಹೇಳಿಕೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.