ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿ-ಕಾಂಗ್ರೆಸ್ ತಂದೆ, ಬಿಜೆಪಿ ತಾಯಿ: ಎಚ್‌ಡಿಕೆ (Kumaraswamy | BJP | JDS | Bangalore | Janardana Reddy | Supreme court)
ಅಕ್ರಮ ಗಣಿಗಾರಿಕೆ ಕುರಿತ ವಾಕ್ಸಮರ ಮುಂದುವರಿದಿದ್ದು, ಅಕ್ರಮ ಗಣಿಗಾರಿಕೆಯಲ್ಲಿ ಕಾಂಗ್ರೆಸ್ ಪಕ್ಷ ತಂದೆಯಾದರೆ, ಬಿಜೆಪಿ ತಾಯಿ ಇದ್ದಂತೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಕೂಡ ಸಾಚಾ ಎಂದು ಭಾವಿಸಬೇಕಾಗಿಲ್ಲ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಆರೋಪಿಸಿದರು.
ರೆಡ್ಡಿಗೆ ಸವಾಲ್: ತನ್ನ ಮೇಲೆ 150 ಕೋಟಿ ರೂಪಾಯಿ ಗಣಿ ಲಂಚ ಆರೋಪ ಹೊರಿಸಿದ್ದಕ್ಕೆ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ದಾಖಲೆ ಬಹಿರಂಗಪಡಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಹಣ ಬಲದಿಂದಲೇ ಎಲ್ಲವನ್ನು ಜಯಿಸುತ್ತೇನೆ ಎಂಬ ಅಹಂಹಾರ ಇನ್ನಾದರೂ ಇಳಿಯಲಿ. ಅದಕ್ಕೆ ಸುಪ್ರೀಂಕೋರ್ಟ್ ನೀಡಿರುವ ಆದೇಶವೇ ಸಾಕ್ಷಿ ಎಂದರು. ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅರಣ್ಯ ಸಚಿವರಾಗಿದ್ದ ಸಿ.ಚನ್ನಿಗಪ್ಪ, ಅಧಿಕಾರಿಗಳ ಜೊತೆ ಗಣಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲೇ ಅಕ್ರಮ ಗಣಿಗಾರಿಕೆಯನ್ನು ಲೋಕಾಯುಕ್ತಕ್ಕೆ ನೀಡಲಾಗಿತ್ತು. ಇದರಿಂದ ಕೆರಳಿದ ಜನಾರ್ದನ ರೆಡ್ಡಿ ತನ್ನ ಮೇಲೆ 150 ಕೋಟಿ ರೂ.ಗಣಿ ಲಂಚದ ಆರೋಪ ಹೊರಿಸಿದ್ದರು ಎಂದರು.
ಆದರೆ ಗಣಿ ಲೂಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸವಾಲು, ಪ್ರತಿಸವಾಲು ಹಾಕುವ ಮೂಲಕ ಸಮಯ ಹಾಳು ಮಾಡುತ್ತಿವೆ. ಇವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ. ಉತ್ತರ ಕುಮಾರನ ಪೌರುಷ ಎಂಬಂತೆ ಹೇಳಿಕೆ ನೀಡುತ್ತಾ ಕಾಲ ಕಳೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.