ಎರಡನೇ ಮದುವೆಗೆ ತಯಾರಿ ನಡೆಸಿ ತಾಳಿ ಕಟ್ಟಲು ಸಿದ್ದವಾಗಿದ್ದ ಸಂದರ್ಭದಲ್ಲಿಯೇ ವರನ ಬಣ್ಣ ಬಯಲಾಗುವ ಮೂಲಕ ವಧುವಿನ ಕಡೆಯವರಿಂದ ಗೂಸಾ ತಿಂದು ಪೊಲೀಸರ ಅತಿಥಿಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಹಾಸನ ಮೂಲದ ಪರಮಶಿವ ಎಂಬಾತ ಚಿಕ್ಕಮಗಳೂರಿನ ಗಾಯತ್ರಿ ಎಂಬಾಕೆ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಅಲ್ಲದೆ, ಒಂದೂವರೆ ಲಕ್ಷ ರೂಪಾಯಿ ವರದಕ್ಷಿಣೆ, ಚಿನ್ನಾಭರಣ ಪಡೆದಿದ್ದ. ಪರಮಶಿವನ ಬಗ್ಗೆ ಯುವತಿಯ ಮನೆಯವರು ಆತನ ಮನೆಯವರಲ್ಲಿ ವಿಚಾರಿಸಿದಾಗಲೂ ಆತ ತುಂಬಾ ಒಳ್ಳೆಯ ವ್ಯಕ್ತಿ ಎಂದೇ ಹೇಳಿದ್ದರು. ಇಷ್ಟೆಲ್ಲಾ ತಯಾರಿಯ ನಂತರ ಗುರುವಾರ ನಗರದ ಕಲ್ಯಾಣ ಮಂಟಪವೊಂದರಲ್ಲಿ ಹಸೆಮಣೆ ಏರಲು ಸಿದ್ದನಾಗಿದ್ದ. ಆದರೆ ವರನ ಮೊದಲ ಹೆಂಡತಿಯಿಂದ ಗುಟ್ಟು ರಟ್ಟಾಗಿ ವಧುವಿನ ಕಡೆಯವರಿಂದ ಹೊಡೆತ ತಿಂದಿದ್ದಾನೆ.
ಈಗ ಪೊಲೀಸ್ ಅತಿಥಿ: ಪತಿ ಪರಮಶಿವ ತನ್ನನ್ನು ವಂಚಿಸಿ ಮತ್ತೊಂದು ಮದುವೆಯಾಗುತ್ತಿರುವ ವಿಷಯ ತಿಳಿದ ಮೊದಲ ಪತ್ನಿ ಭದ್ರಾವತಿಯ ಶಾರದಾ ಎಂಬಾಕೆ ಪೊಲೀಸರೊಂದಿಗೆ ಆಗಮಿಸಿದ್ದಳು. ಆಗ ಖದೀಮ ಪರಮಶಿವನ ಜಾತಕ ಬಯಲಾಗಿತ್ತು. ಇದರಿಂದ ಕೆರಳಿದ ವಧುವಿನ ಕಡೆಯವರು ಪರಮಶಿವನನ್ನು ಹಿಡಿದು ಥಳಿಸಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಯುವತಿಯ ಮನೆಯವರಿಂದ ಪಡೆದ ಒಂದೂವರೆ ಲಕ್ಷ ರೂ.ನಗದು, ಚಿನ್ನಾಭರಣ ವಾಪಸ್ ನೀಡುವಂತೆ ಪರಮಶಿವನಿಗೆ ಪೊಲೀಸರು ಸೂಚಿಸಿದ್ದಾರೆನ್ನಲಾಗಿದೆ.
ಏತನ್ಮಧ್ಯೆ ಗಾಯತ್ರಿಯನ್ನು ಸಂಬಂಧಿಯೊಬ್ಬನ ಜತೆ ರಾತ್ರೋರಾತ್ರಿ ಮದುವೆ ನೆರವೇರಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪರಮಶಿವನ ವಿರುದ್ಧ ಮೊದಲ ಪತ್ನಿ ಶಾರದಾ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ. ಅದರಂತೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.