ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗ್ರಾಮ ಸಡಕ್-ಕೇಂದ್ರದಿಂದ ಅಸಹಕಾರ: ಜಗದೀಶ ಶೆಟ್ಟರ್ (Jagadish Shettar | BJP | Congress | JDS | Karnataka)
Bookmark and Share Feedback Print
 
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಹಣ ಬಿಡುಗಡೆಗೊಳಿಸಲು ಕೇಂದ್ರ ಸರಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ ರಾಜ್ಯ ದ್ವಿತೀಯ ಸ್ಥಾನದಲ್ಲಿದೆ. ಆದರೆ 9ನೇ ಹಂತದ ಕಾಮಗಾರಿಗಳಿಗೆ ಕೇಂದ್ರ ಸರಕಾರ ಹಣ ಬಿಡುಗಡೆಗೊಳಿಸಿಲ್ಲ. ಈ ಬಗ್ಗೆ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಹಾಗೂ ಕೆ.ಎಚ್.ಮುನಿಯಪ್ಪನವರನ್ನು ಭೇಟಿ ಮಾಡಿ ಮಾಹಿತಿ ನೀಡಲಾಗಿದೆ. ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಮೊಯ್ಲಿ ತಿಳಿಸಿದ್ದರೂ ಸರಕಾರ ಹಣ ಬಿಡುಗಡೆಗೆ ಮನಸ್ಸು ಮಾಡಿಲ್ಲ ಎಂದರು.

2001ರಲ್ಲಿ ಆರಂಭಗೊಂಡ ಯೋಜನೆಗೆ ರಾಜ್ಯಕ್ಕೆ 3,198 ಕೋಟಿ ರೂ.ನೀಡಲಾಗಿತ್ತು. ಈವರೆಗೆ 2,685 ಕೋಟಿ ರೂ.ವೆಚ್ಚದಲ್ಲಿ 12,450 ಕಿ.ಮೀ.ರಸ್ತೆ ನಿರ್ಮಿಸಲಾಗಿದೆ. ಪ್ರಸಕ್ತ ವರ್ಷ 1,400 ಕೋಟಿ ರೂ.ನೀಡಬೇಕಿದ್ದು, 4,304 ಕಿ.ಮೀ.ರಸ್ತೆ ನಿರ್ಮಿಸುವ ಉದ್ದೇಶವಿದೆ. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ರಾಜ್ಯದ ಸಂಸದರಿಗೂ ಮನವಿ ಮಾಡಲಾಗಿದೆ. ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದಿದ್ದರೆ ರಾಜ್ಯಕ್ಕೆ ಯೋಜನೆ ದೊರೆಯುವುದು ಅನುಮಾನ ಎಂದು ಶೆಟ್ಟರ ಅಭಿಪ್ರಾಯಪಟ್ಟರು.

ಈಗಾಗಲೇ ಅಗತ್ಯವಿರುವ ಸ್ಥಳಗಳಲ್ಲಿ ಪಿಡಿಒಗಳನ್ನು ನೇಮಕಗೊಳಿಸಲಾಗಿದೆ. ಈ ವರ್ಷವೂ ಸಾವಿರ ಪಿಡಿಒಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಸ್ಥಳಾವಕಾಶದ ಕೊರತೆಯಿಂದ ಉತ್ತರ ಕರ್ನಾಟಕದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಸಾಮೂಹಿಕ ಶೌಚಾಲಯ ನಿರ್ಮಿಸಬೇಕು ಎಂಬ ಸಲಹೆ ದೊರೆತಿದೆ. ಕೆಲ ಗ್ರಾಮಗಳಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಿ ನಿರ್ದಿಷ್ಟ ವ್ಯಕ್ತಿಗಳ ಸುಪರ್ದಿಗೆ ನೀಡುವ ಉದ್ದೇಶವಿದೆ ಎಂದರು.

ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಗೆ ರಾಜ್ಯದ ಹೆಚ್ಚಿನ ಗ್ರಾಮಗಳು ಆಯ್ಕೆಯಾಗಬೇಕು ಎಂಬುದು ನಮ್ಮ ಆಸೆ. ಈ ನಿಟ್ಟಿನಲ್ಲಿ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ. ಡಿಸೆಂಬರ್‌ನಲ್ಲಿ ಬಹುಗ್ರಾಮ ಯೋಜನೆ ಪೂರ್ಣಗೊಳ್ಳಲಿದೆ. ಸುವರ್ಣ ಗ್ರಾಮ ಹಾಗೂ ಎನ್ಆರ್ಇಜಿಎ ಯೋಜನೆಗಳಲ್ಲಿ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ