ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಾವೇರಿ: ಭಂಗಿ ಸಮುದಾಯದ ಪ್ರತಿಭಟನೆ ವಾಸಸ್ (Havery | Bhanghi | Muruga muta | Chitra durga | Banaglore)
Bookmark and Share Feedback Print
 
ಆ.15 ರಂದು ಮತ್ತೊಮ್ಮೆ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದ ಸವಣೂರಿನ ಭಂಗಿ ಸಮುದಾಯದವರು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ಮಾತಿಗೆ ಮಣಿದಿದ್ದು, ತಮ್ಮ ಈ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ.

ಅಷ್ಟೇ ಅಲ್ಲದೇ, ಇನ್ನೆಂದೂ ಮಲ ಹೊರುವ ಕೆಲಸವನ್ನು ಮಾಡುವುದಿಲ್ಲ ಎಂದು ಶರಣರ ಮುಂದೆ ಪ್ರತಿಜ್ಞೆಯನ್ನೂ ಮಾಡಿದ್ದಾರೆ. ಸವಣೂರಿನ ಭಂಗಿಗಳ ಮನೆಗೆ ಬುಧವಾರ ಭೇಟಿ ನೀಡಿದ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

ವಾಸವಿರುವ ಮನೆಗಳ ಪಟ್ಟಾ ವಿತರಣೆಯಲ್ಲಿ ಮೀನಮೇಷ ಮತ್ತು ಕಾಯಂ ನೌಕರಿ ನೀಡದೇ ಇರುವುದಕ್ಕೆ ರೋಸಿ ಹೋಗಿದ್ದ ಭಂಗಿಗಳು ಮತ್ತೊಂದು ಉಗ್ರ ಹೋರಾಟಕ್ಕೆ ಅಣಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಇದೇ ಆ.15 ರಂದು ಬೆಂಗಳೂರಿನ ವಿಧಾನಸೌಧದ ಮುಂದೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸುವ ಕುರಿತು ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಆದರೆ, ಸಕಾಲಕ್ಕೆ ಮಧ್ಯ ಪ್ರವೇಶಿಸಿದ ಶರಣರು ಹತಾಶೆಗೊಂಡಿದ್ದ ಭಂಗಿ ಜನರನ್ನು ಮನವೊಲಿಸಲು ಯಶಸ್ವಿಯಾಗಿದ್ದಾರೆ. ಜತೆಗೆ, ಮಲ ಹೊರದಂತೆ ಮತ್ತು ಪ್ರತಿಭಟನೆ ಮಾಡದಂತೆ ಅವರಿಗೆ ಪ್ರತಿಜ್ಞಾ ವಿಧಿಯನ್ನೂ ಬೋಧಿಸಿ ಈ ಅನಿಷ್ಠ ಪದ್ಧತಿಯಿಂದ ಮಾನಸಿಕವಾಗಿ ಅವರನ್ನು ದೂರ ಮಾಡಿದ್ದಾರೆ.

ಇದರಿಂದ ಸರಳವಾಗಿ ಸಮಸ್ಯೆ ಬಗೆಹರಿದಿರುವುದು ಜಿಲ್ಲಾಡಳಿತಕ್ಕೆ ನೆಮ್ಮದಿ ತಂದಿದೆ. ಆದರೆ, ಸಮಸ್ಯೆಗಳಿಗೆ ಸರಕಾರ ಸ್ಪಂದಿಸದೇ ಇದ್ದಾಗ ಸಾಮಾಜಿಕ ನ್ಯಾಯದ ಹೋರಾಟಗಳನ್ನು ಮಾಡುತ್ತೇವೆ ಹೊರತು, ಇನ್ನು ಮುಂದೆ ಎಂದಿಗೂ ಮೈಮೇಲೆ ಮಲ ಸುರುವಿಕೊಂಡು ಪ್ರತಿಭಟನೆ ಮಾಡುವುದಿಲ್ಲ ಎಂದೂ ಭಂಗಿಗಳು ಹೇಳಿದ್ದಾರೆ.

ಭಂಗಿ ಸಮುದಾಯದ ಸಮಸ್ಯೆಗಳನ್ನು ಆಲಿಸಿ ಅವರಿಗೆ ನೆರವು, ಧೈರ್ಯ ಹಾಗೂ ಸಾಂತ್ವನ ಹೇಳಿದ ನಂತರ ಮಾತನಾಡಿದ ಶರಣರು, ಸಾಮಾಜಿಕ ನ್ಯಾಯಕ್ಕಾಗಿ ಹಲವಾರು ಹೋರಾಟಗಳು ಇರುವಾಗ ನೀವು ಇದೇ ರೀತಿ ಪ್ರತಿಭಟನೆಗೆ ಮುಂದಾಗುತ್ತೇವೆಂದರೆ ನಿಮಗೇಕೆ ಸಹಾಯ ಮಾಡುವುದು ? ಹೀಗಾದರೆ ನಾವ್ಯಾರೂ ನಿಮ್ಮ ಜತೆ ಬರುವುದಿಲ್ಲ ಎಂದರು.

ನಿಮ್ಮದೇ ಒಂದು ದಾರಿ ಬೇರೆಯಾಗಬಾರದು. ನೀವು ಅಸ್ಪ್ರಶ್ಯತೆ ಭಾವನೆ ತೊರೆಯಬೇಕು. ಭಂಗಿ ಸಮುದಾಯದವರು ತಮ್ಮ ಹಲವಾರು ವರ್ಷಗಳ ಅನ್ಯಾಯವನ್ನು ಬಹಳ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಇದಕ್ಕೆ ಸರಕಾರ ಸ್ಪಂದಿಸಿ ಈಗಾಗಲೇ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿದೆ ಎಂದು ಹೇಳಿದರು.

ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ದತ್ತು ಕೊಡಿ. ಶ್ರೀಮಠ ಮಕ್ಕಳಿಗೆ ಶಿಕ್ಷಣ ನೀಡಲು ಸಿದ್ಧವಿದೆ. ಮುಂದಿನ ದಿನಗಳಲ್ಲಿ ಈ ನಿವೇಶನದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸಲು ಶ್ರೀಮಠ ಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದರು.

ಎಸ್.ಜೆ.ಎಂ.ವಿದ್ಯಾಪೀಠದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ತಜ್ಞ ವೈದ್ಯರ ತಂಡ ವೈದ್ಯಕೀಯ ತಪಾಸಣೆ ನಡೆಸಿ ಈ ಸಮುದಾಯದವರಿಗೆ ಔಷಧಿ ಹಾಗೂ ಬಟ್ಟೆಗಳನ್ನು ನೀಡಲಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ