ಗಣಿ ಲಂಚ-ಮುಖಂಡರ ಜತೆ ಚರ್ಚಿಸಿ ನಿರ್ಧಾರ: ಜನಾರ್ದನ ರೆಡ್ಡಿ
ಬಳ್ಳಾರಿ, ಗುರುವಾರ, 12 ಆಗಸ್ಟ್ 2010( 18:36 IST )
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಗಣಿ ಲಂಚ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಬೇಕೋ ಇಲ್ಲವೆ ಲೋಕಾಯುಕ್ತ ತನಿಖೆಗೆ ನೀಡಬೇಕೋ ಎನ್ನುವುದನ್ನು ಪಕ್ಷದ ಮುಖಂಡರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಚಿವ ಜಿ.ಜನಾರ್ದನರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006ರಲ್ಲಿ ಕುಮಾರಸ್ವಾಮಿ ವಿರುದ್ಧ ಗಣಿ ಲಂಚ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಹೂಡಲಾಗಿದ್ದ ದಾವೆಯನ್ನು ಹಿಂಪಡೆಯಲಾಗಿದೆ. ಇದು ಹಿನ್ನಡೆಯಲ್ಲ. ಕೋರ್ಟ್ ನಿಯಮಗಳ ಪಾಲನೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ ಕ್ಷುಲ್ಲಕವಾಗಿ ಮಾತನಾಡಿದ ಹಿರಿಯ ಧುರೀಣ ಎಂ.ಪಿ.ಪ್ರಕಾಶ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಪುನರುಚ್ಚಿಸಿದ ಜನಾರ್ದನರೆಡ್ಡಿ, ಅನುಭವ ಇರುವವರು ಮತ್ತೊಬ್ಬರ ವಿರುದ್ಧ ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂದರು.