ಬಿಜೆಪಿ ನಾಯಕಿ, ನಾಯಕರು ಬಂದರೆ ಬಳ್ಳಾರಿ ಮೇಲೆ ವಕ್ರದೃಷ್ಟಿಯಾಗುತ್ತಿದ್ದು, ಆಗ ಮಾತ್ರ ಹೋಮ, ಹವನ ಮಾಡಬೇಕು ಎಂದು ಮಾಜಿ ಶಾಸಕ, ಜೆಡಿಎಸ್ ಧುರೀಣ ಎನ್.ಸೂರ್ಯನಾರಾಯಣ ರೆಡ್ಡಿ ವ್ಯಂಗವಾಡಿದ್ದಾರೆ.
ಇಲ್ಲಿಯ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಳ್ಳಾರಿ ಮೇಲೆ ವಕ್ರದೃಷ್ಟಿ ಬಿದ್ದಿದೆ. ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬಂದರೆ ಪವಿತ್ರ, ಉಳಿದ ಪಕ್ಷದ ಮುಖಂಡರು, ಕಾರ್ಯಕರ್ತರು ಬಂದರೆ ಅಪವಿತ್ರವೇ ಎಂದು ಪ್ರಶ್ನಿಸಿದರು. ಕೇಂದ್ರದಲ್ಲಿ ಆರೋಗ್ಯ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಬಳ್ಳಾರಿ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ವಿರುದ್ಧ ಸಚಿವ ಜನಾರ್ದನರೆಡ್ಡಿ ಟೀಕೆ ಅಮಾನವೀಯ. ಪ್ರಕಾಶ್ ಅವರ ಗರಡಿಯಲ್ಲೇ ಬೆಳೆದವರು ಇಷ್ಟು ಕೆಟ್ಟದಾಗಿ ಮಾತನಾಡುವುದು ನಾಚಿಕೆಗೇಡು ಎಂದರು. ಅಮಾಯಕರಾಗಿರುವ ಸಚಿವ ಬಿ.ಶ್ರೀರಾಮುಲು ತಲೆ ಬೋಳಿಸಿರುವ ಸಚಿವ ಜನಾರ್ದನರೆಡ್ಡಿ, ಜಿಲ್ಲೆಯ ಉಸ್ತುವಾರಿ ಹೊತ್ತಿದ್ದರೂ ಏಕೆ ತಲೆ ಬೋಳಿಸಿಕೊಂಡಿಲ್ಲ ಎಂದು ಪ್ರಶ್ನಿಸಿದರು.
ರೆಡ್ಡಿ ಸವಾಲಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ತಾಕತ್ತು ತೋರಿಸಲು ಬಳ್ಳಾರಿಗೆ ಬಂದು ಹೋದರು. ಜನತೆಗೆ ಒಳ್ಳೆಯದು ಮಾಡಬೇಕು ಎನ್ನುವ ಅಪೇಕ್ಷೆಯಿಂದ ಬಂದಿಲ್ಲ ಎಂದು ಟೀಕಿಸಿದರು. ಜೆಡಿಎಸ್ ಜನಪರ ಹೋರಾಟ ಮುಂದುವರಿಯಲಿದ್ದು, 'ತುಂಗಭದ್ರಾ ಉಳಿಸಿ, ಬಿಜೆಪಿ ಕಳಿಸಿ' ಪಾದಯಾತ್ರೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.